ಚಿತ್ರದುರ್ಗ: ಪತ್ನಿ, ಮಗಳು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ಮಾಡಿ ವ್ಯಕ್ತಿ ಪರಾರಿ....!!
ಚಿತ್ರದುರ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ತನ್ನಿಂದ ದೂರವಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿಯೋರ್ವ ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಮಾಳಪ್ಪನಹಟ್ಟಿಯಲ್ಲಿ ಗುರುವಾರ ನಡೆದಿದೆ.
ಮೊಹಮ್ಮದ್ ಸುಹೇಲ್ (44) ಎಂಬಾತನೇ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ಆರೋಪಿ. ಘಟನೆಯಲ್ಲಿ, ಆತನ ಪತ್ನಿ ತಾಸಿನಾಬಾನು, ಮಗಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಇವರಿಬ್ಬರೂ ಕಳೆದ 8 ತಿಂಗಳುಗಳಿಂದ ದೂರವಾಗಿ ವಾಸವಿದ್ದರು.
ಚಿತ್ರದುರ್ಗ ನಗರದ ನಗ್ಮಾ ನಾಯ್ಕ್ ಎಂಬವರ ಮನೆಗೆ ಆಕೆಯ ಸಹೋದರಿಯರಾದ ತಾಸಿನಾಬಾನು ಹಾಗೂ ನೇಹಾ ಅವರ ಮಕ್ಕಳೊಂದಿಗೆ ಹಬ್ಬಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದರು. ಈ ವಿಷಯ ತಿಳಿದು ಏಕಾಏಕಿ ಇವರ ಮನೆಗೆ ನುಗ್ಗಿದ ಸುಹೇಲ್, ಆ್ಯಸಿಡ್ ದಾಳಿ ನಡೆಸಿದ್ದಾನೆ. ಮೊದಲಿಗೆ, ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ, ಜಗಳ ಬಿಡಿಸಲು ಮುಂದಾದ ತಾಸಿನಾಬಾನು ಅವರ ಹಿರಿಯ ಸಹೋದರಿ ನಗ್ಮಾ ನಾಯ್ಕ್, ಕಿರಿಯ ಸಹೋದರಿ ನೇಹಾ ಹಾಗೂ ಆಕೆಯ 4 ವರ್ಷದ ಪುತ್ರಿ ಹಾಗೂ ತನ್ನ 11 ವರ್ಷದ ಮಗಳು ಸೇರಿ ಐವರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡಿರುವ ಪತ್ನಿಯು ಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಆತನೊಂದಿಗೆ ಜೀವನ ಸಾಗಿಸಲು ಹಲವು ಅವಕಾಶ ನೀಡಿದರೂ ಕೂಡ ಪ್ರಯೋಜನ ಆಗಿಲ್ಲ. ಹೀಗಾಗಿ ಅವನ ಹಿಂಸೆ ತಾಳಲಾರದೇ ನಾನು ದೂರವಾಗಿದ್ದು, ಬೆಂಗಳೂರಿನಲ್ಲಿದ್ದೇನೆ. ಆತ ಚಿತ್ರದುರ್ಗದಲ್ಲಿದ್ದು, ಈ ದುಷ್ಕೃತ್ಯ ಎಸಗಿದ್ದಾನೆ. ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೋಟೆ ಠಾಣೆ ವ್ಯಾಪ್ತಿಯಲ್ಲಿ ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ. ನೆಹರುನಗರದ ಆಟೋ ಚಾಲಕನಾದ ಆರೋಪಿ ಮೊಹಮ್ಮದ್ ಸುಹೇಲ್ ಕೌಟುಂಬಿಕ ಕಲಹದಿಂದ ತನ್ನ ಪತ್ನಿಯಿಂದ ಕಳೆದ ಎಂಟು ತಿಂಗಳಿಂದ ದೂರವಾಗಿದ್ದ. ಪತ್ನಿ ತಾಸಿನಾಬಾನು ತನ್ನ ಅಕ್ಕನ ಮನೆಗೆ ಬಂದಾಗ ಹಲ್ಲೆ ಮಾಡಲು ಯತ್ನಿಸಿದ್ದಾನೆ. ತನ್ನ ಜೊತೆ ತಂದಿದ್ದ ಆ್ಯಸಿಡ್ ಬಾಟಲ್ ಎಸೆದಿದ್ದು, ಆ್ಯಸಿಡ್ ಬಿದ್ದು ಸುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಚಿಕಿತ್ಸೆ ನೀಡಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸ್ ತಂಡಗಳನ್ನು ರಚಿಸಿದ್ದೇವೆ. ಆತ ಮಚ್ಚು ಕೂಡ ತೆಗೆದುಕೊಂಡು ಬಂದಿದ್ದ. ಅದರಿಂದಲೂ ಹಲ್ಲೆ ಮಾಡಿದ್ದಾನೆ. ಮೊದಲಿನಿಂದಲೂ ದಂಪತಿ ನಡುವೆ ಜಗಳವಾಗುತ್ತಿತ್ತು. ಎಂಟು ತಿಂಗಳ ಹಿಂದೆ ಇಬ್ಬರೂ ದೂರವಾಗಿದ್ದರು. ಆದರೂ ಕೂಡ ಆರೋಪಿ ದ್ವೇಷ ಹೊಂದಿದ್ದ. ಆತನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದರು.