ಶಿವಮೊಗ್ಗ: ಏಕಾಏಕಿ ಜೇನುದಾಳಿ ಶಾಲಾ ಮಕ್ಕಳು ಸೇರಿ ನಾಲ್ವರಿಗೆ ಗಾಯ....!!
ಶಿವಮೊಗ್ಗ: ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಬ್ಯಾಂಕ್ ನೌಕರ ಹಾಗೂ ಶಾಲಾ ಮಕ್ಕಳು ಸೇರಿ ನಾಲ್ವರಿಗೆ ಗಾಯವಾಗಿರುವ ಘಟನೆ ಹೊಸನಗರ ತಾಲೂಕು ರಿಪ್ಪನಪೇಟೆಯಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ರಿಪ್ಪನ್ಪೇಟೆ ಗ್ರಾಮದ ಮುಖ್ಯರಸ್ತೆಯಲ್ಲಿನ ಎಸ್ಬಿಐ ಬ್ಯಾಂಕ್ ಮುಂಭಾಗ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿವೆ. ಈ ವೇಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಮಕ್ಕಳ ಮೇಲೆ ಹಾಗೂ ಬ್ಯಾಂಕ್ ನೌಕರ ತೌಸಿಫ್ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಇದರಲ್ಲಿ ತೌಸಿಫ್ ಅವರ ಮುಖಕ್ಕೆ 20ಕ್ಕೂ ಹೆಚ್ಚು ಜೇನು ನೊಣಗಳು ದಾಳಿ ಮಾಡುತ್ತಿದ್ದಂತಯೇ ಶಾಲಾ ವಿದ್ಯಾರ್ಥಿಗಳು ಓಡಿ ಹೋಗಿ ಬಚಾವ್ ಆಗಿದ್ದಾರೆ. ಆದರೂ ವಿದ್ಯಾರ್ಥಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಜೇನು ಕಚ್ಚಿವೆ.
ತಕ್ಷಣ ಎಲ್ಲರನ್ನೂ ರಿಪ್ಪನ್ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಆದರೆ, ತೌಸಿಫ್ ಅವರ ಮುಖಕ್ಕೆ ಜೇನು ಹೆಚ್ಚು ಕಚ್ಚಿದ ಪರಿಣಾಮ ಅವರ ಮುಖ ದಪ್ಪಗಾಗಿತ್ತು. ಇದರಿಂದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ರಿಪ್ಪನ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೇನುನೊಣ ಕಡಿದು ಸಾವು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಜೇನುನೊಣಗಳು ದಾಳಿ ನಡೆಸಿ ಕಚ್ಚಿದ ಪರಿಣಾಮ ರೈತರೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಇತ್ತೀಚೆಗೆ ಸಂಭವಿಸಿತ್ತು. ಈ ವೇಳೆ ಮಗನಿಗೂ ಜೇನು ನೊಣಗಳು ಕಚ್ಚಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಕರಿಯಾ ನಾಯ್ಕ (61) ಮೃತ ರೈತ.
ಮರದ ಮೇಲಿದ್ದ ಜೇನುನೊಣಗಳು ಏಕಾಏಕಿ ಹಿಂಡು ಹಿಂಡಾಗಿ ದಾಳಿ ಮಾಡಿವೆ. ಜೇನು ಕಡಿತದ ತೀವ್ರತೆಗೆ ಕರಿಯಾ ನಾಯ್ಕ ಅವರು ಸ್ಥಳದಲ್ಲೇ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಖರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆಯ ನಂತರ ಅವರ ಸ್ಥಿತಿ ಗಂಭೀರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಚಿಕ್ಕಮಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದರು.
ಘಟನೆಗೆ ಸಂಬಂಧಿಸಿದಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.