ಮಂಗಳೂರು: ಭೂ ವಿವಾದದ ದ್ವೇಷ; ಕಾರು ಗುದ್ದಿಸಿ ವ್ಯಕ್ತಿಯ ಹತ್ಯೆಗೆ ಯತ್ನ...!

ಮಂಗಳೂರು: ಭೂ ವಿವಾದದ ದ್ವೇಷ; ಕಾರು ಗುದ್ದಿಸಿ ವ್ಯಕ್ತಿಯ ಹತ್ಯೆಗೆ ಯತ್ನ...!

ಇನ್ನೋವಾ ಕಾರು ಗುದ್ದಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಹತ್ಯೆಗೆ ಯತ್ನ

ಮಂಗಳೂರು: ಭೂ ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷದಿಂದ ವ್ಯಕ್ತಿಯ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ ಯುವಕನನ್ನು ಮಂಗಳೂರು ಪೂರ್ವ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪನ್ನೀರ್ ನಿವಾಸಿ ಮೊಹಮ್ಮದ್ ಶರೀಫ್ (26) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 109, 281, 352, 351 ಹಾಗೂ 304(2) ಅಡಿ ಪ್ರಕರಣ ದಾಖಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಮತ್ತು ಶರೀಫ್ ಹಾಗೂ ಆತನ ತಂದೆ ಇಕ್ಬಾಲ್ ನಡುವೆ ಭೂ ವ್ಯವಹಾರ ಸಂಬಂಧಿತ ಹಣಕಾಸು ವ್ಯಾಜ್ಯ ಇತ್ತು. ಸುರತ್ಕಲ್‌ನ ಖಾನ ಹಾಗೂ ವಾವಂಜೂರು ಪ್ರದೇಶಗಳಲ್ಲಿ ಸುಮಾರು ₹2 ಕೋಟಿ ಹೂಡಿಕೆ ಮಾಡಿದ ವಿಷಯದಲ್ಲಿ ಮೋಸ ನಡೆದಿದೆ ಎಂಬ ಅನುಮಾನದಿಂದ ಆರೋಪಿ ದ್ವೇಷ ಬೆಳೆಸಿಕೊಂಡಿದ್ದಾನೆ.

ಇದೇ ಕಾರಣದಿಂದ ಮಂಗಳವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಆರೋಪಿ, ಮೋಹನ್ ದಾಸ್ ಶೆಟ್ಟಿ ಅವರ ಮೊಬೈಲ್‌ ಕಸಿದುಕೊಂಡಿದ್ದಾನೆ. ನಂತರ ಶೆಟ್ಟಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಆರೋಪಿ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿವೇಗವಾಗಿ ಚಲಾಯಿಸಿ ಹಿಂಬದಿಯಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಶರೀಫ್‌ ವೇಗವಾಗಿ ಇನ್ನೋವಾ ಕಾರು ಓಡಿಸುತ್ತಾ, ಮೋಹನ್‌ ದಾಸ್‌ ಶೆಟ್ಟಿ ಅವರ ಬೈಕ್‌ಗೆ ಗುದ್ದಿರುವ ಸಿಸಿಟಿವಿ ವಿಡಿಯೋ ದೊರೆತಿದೆ.

ಘಟನೆಯ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article