ಶಿವಮೊಗ್ಗ: ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ; ಸ್ಥಳದಲ್ಲೇ ದಂಪತಿ ದುರ್ಮರಣ.
ಶಿವಮೊಗ್ಗ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕು ಹೆಚ್.ಕೆ.ಜಂಕ್ಷನ್ ಬಳಿ ಭಾನುವಾರ ರಾತ್ರಿ ಸಂಭವಿಸಿದೆ. ಬಾಬು (30) ಹಾಗೂ ಸಾವಿತ್ರಿ (26) ಎಂಬವರು ಅಸುನೀಗಿದ್ದಾರೆ.
ದಂಪತಿ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಅರವನಹಳ್ಳಿಯ ಗೌಳಿಗೆರೆ ಕ್ಯಾಂಪ್ ನಿವಾಸಿಗಳು. ಶಿವಮೊಗ್ಗದ ವೆಜ್ ಫುಡ್ ಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ಬಾಬು ತಂದೂರಿ ರೊಟ್ಟಿ ತಯಾರಕನಾಗಿದ್ದು, ಸಾವಿತ್ರಿ ಇಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು.
ನಿನ್ನೆ ರಾತ್ರಿ ಫುಡ್ ಕೋರ್ಟ್ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಹುಣಸೆಘಟ್ಟ ಜಂಕ್ಷನ್ನಿಂದ ಶಂಕರಘಟ್ಟ ಕಡೆ ಹೋಗುವಾಗ ರಸ್ತೆಯಲ್ಲಿ ಲೋಡ್ ತುಂಬಿದ ಲಾರಿಯೊಂದು ಇವರ ಬೈಕ್ ಮುಂದೆ ಸಾಗುತ್ತಿತ್ತು. ಅಲ್ಲಿ ರಸ್ತೆ ಸ್ವಲ್ಪ ಎತ್ತರವಿದ್ದು, ಲಾರಿ ನಿಧಾನವಾಗಿ ಚಲಿಸಲು ಆರಂಭಿಸಿದೆ. ಆಗ ವೇಗದಲ್ಲಿದ್ದ ಬೈಕ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ರಸ್ತೆಗೆ ಬಿದ್ದು, ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.