ಮೈಸೂರು: ದಾಸವಾಳ ಹೂವಿನ ದಿಂಡು ನುಂಗಿ ಗಂಡು ಮಗು ಸಾವು...
ಮೈಸೂರು: ದಾಸವಾಳದ ಹೂವಿನ ದಿಂಡಿನ ಭಾಗವನ್ನು ನುಂಗಿದ ಆರೂವರೆ ತಿಂಗಳಿನ ಮಗು ಉಸಿರಾಟದ ಸಮಸ್ಯೆಯಿಂದ ಬಳಲಿ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರಿನಲ್ಲಿ ನಡೆದಿದೆ.
ಹನಗೋಡು ಹೋಬಳಿಯ ದೊಡ್ಡ ಹೆಜ್ಜೂರಿನ ಸುದರ್ಶನ್ ಹಾಗೂ ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯ್ ಗೌಡ ಮೃತಪಟ್ಟ ಮಗು. ಮನೆಯ ಹೊಸ್ತಿಲಲ್ಲಿ ಇಟ್ಟಿದ್ದ ದಾಸವಾಳ ಹೂವಿನ ದಿಂಡು ನುಂಗಿದ ಪರಿಣಾಮ, ಶ್ವಾಸಕೋಶದಲ್ಲಿ ಸಿಲುಕಿ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಮನೆಯ ಹೊಸಲಿಗೆ ಪೂಜೆ ಮಾಡಿ ದಾಸವಾಳದ ಹೂವುಗಳನ್ನು ಇಡಲಾಗಿತ್ತು. ಈ ವೇಳೆ ಮಗು ಚಿನ್ಮಯ್ ತನ್ನ ಅಣ್ಣನ ಜೊತೆ ಆಟವಾಡುತ್ತಿದ್ದ. ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಬಾಯಿಗೆ ಹಾಕಿಕೊಂಡಿದ್ದ ಚಿನ್ಮಯ್, ಇದನ್ನು ಗಮನಿಸಿದ ಮಗುವಿನ ಅಣ್ಣ ಹೂ ಹೊರತೆಗೆಯಲು ಪ್ರಯತ್ನಿಸಿದ್ದನಾದರೂ, ಅಷ್ಟರಲ್ಲೇ ಮಗು ಆ ದಿಂಡನ್ನು ನುಂಗಿಬಿಟ್ಟಿದೆ.
ಮಗು ನುಂಗಿದ ಹೂವಿನ ಭಾಗವು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತೀವ್ರವಾದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಗ್ರಾಮಸ್ಥ ಮಹದೇವ್, "ಆರೂವರೆ ವರ್ಷದ ಗಂಡು ಮಗು ದಾಸವಾಳ ಹೂವಿನ ದಿಂಡಿನ ಭಾಗ ನುಂಗಿ ಒದ್ದಾಡುತ್ತಿತ್ತು. ಪೋಷಕರು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಆದರೆ, ಚಿಕಿತ್ಸೆ ಕಷ್ಟವಾಗಲಿದೆ ಎಂದಾಗ ಕೂಡಲೇ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋದರು. ಆದರೆ ಮಗು ಮೃತಪಟ್ಟಿರುವ ವಿಷಯ ತಿಳಿದು, ತಂದೆ-ತಾಯಿಯಷ್ಟೇ ಗ್ರಾಮಸ್ಥರಿಗೂ ತುಂಬಾ ನೋವಾಗಿದೆ. ಚಿಕ್ಕ ಮಕ್ಕಳ ಮೇಲೆ ಸದಾ ಎಚ್ಚರಿಕೆ ವಹಿಸಬೇಕು" ಎಂದರು.