ಬೆಳಗಾವಿ :4 ಬಾರಿ ಸೋಲು, ಕೊನೆಯ ಅವಕಾಶದಲ್ಲಿ 224ನೇ ರ‍್ಯಾಂಕ್: UPSC ಯಶಸ್ಸಿನ ಗುಟ್ಟು ತಿಳಿಸಿದ ಬೆಳಗಾವಿಯ ರಾಹುಲ್ ಪಾಟೀಲ....!

ಬೆಳಗಾವಿ :4 ಬಾರಿ ಸೋಲು, ಕೊನೆಯ ಅವಕಾಶದಲ್ಲಿ 224ನೇ ರ‍್ಯಾಂಕ್: UPSC ಯಶಸ್ಸಿನ ಗುಟ್ಟು ತಿಳಿಸಿದ ಬೆಳಗಾವಿಯ ರಾಹುಲ್ ಪಾಟೀಲ....!

"ನಾಲ್ಕು ಅವಕಾಶಗಳಲ್ಲಿ ಯಶಸ್ಸು ಸಿಕ್ಕಿರಲಿಲ್ಲ. 2023ರಲ್ಲಿ 5ನೇ ಅವಕಾಶದಲ್ಲಿ 804ನೇ ರ‍್ಯಾಂಕ್ ಬಂದಾಗ ಭಾರತೀಯ ರೈಲ್ವೆ ಸಂಚಾರ ಸೇವೆ ಸೇರಿದೆ. ಈಗ 6ನೇ ಮತ್ತು ಕೊನೆಯ ಅವಕಾಶದಲ್ಲಿ 224ನೇ ರ‍್ಯಾಂಕ್ ಪಡೆದಿದ್ದು, ಬಹುತೇಕ ಐಎಎಸ್ ಸಿಗುವ ನಿರೀಕ್ಷೆ ಇದೆ. ಬಹಳ ಖುಷಿ ಆಗುತ್ತಿದೆ" ಎಂದರು.

ಸತತ ಸೋಲು ಕುಗ್ಗಿಸಿತ್ತು: "2019ರಿಂದ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಶುರು ಮಾಡಿದೆ. ಮೊದಲ ನಾಲ್ಕು ವರ್ಷ ಸಾಕಷ್ಟು ಕಷ್ಟ ಅನುಭವಿಸಿದ್ದೇನೆ. ಸತತ ವೈಪಲ್ಯ ನನ್ನನ್ನು ಬಹಳಷ್ಟು ಕುಗ್ಗಿಸಿತ್ತು. ಪ್ರತೀ ಸಲ ಫೇಲ್ ಆದಾಗಲೂ ಮತ್ತೆ ಮೊದಲಿನಿಂದ ಓದಬೇಕಿತ್ತು. ನಾಲ್ಕು ಅವಕಾಶಗಳಲ್ಲಿ ವೈಫಲ್ಯ ಕಂಡಾಗ, ಯಾವುದಾದರೂ ಎಂಎನ್ಸಿ ಕಂಪನಿ ಸೇರಲು ನಿರ್ಧರಿಸಿದ್ದೆ. ಆ ಸಮಯದಲ್ಲಿ ನನ್ನ ತಂದೆ-ತಾಯಿ, ಅಣ್ಣ, ಅಕ್ಕ ನನಗೆ ಧೈರ್ಯ ತುಂಬಿದರು‌. ಇದೊಂದು ಸಲ ಪರೀಕ್ಷೆ ಬರೆದು ಬಿಡು, ಆಗದಿದ್ದರೆ ನಿನ್ನಿಷ್ಟದಂತೆ ಮಾಡು ಎಂದಿದ್ದರು. ಅದರ ಪ್ರತಿಫಲವೇ ನನಗೆ 224ನೇ ರ‍್ಯಾಂಕ್ ಸಿಕ್ಕಿದೆ. ಮೆಂಟರ್‌ಗಳಾದ ಶಬ್ಬೀರ್, ಹಿಮಾಚು ಗುರುಗಳ ಪ್ರೋತ್ಸಾಹದಿಂದ ನನ್ನ ಗುರಿ ತಲುಪಿದೆ" ಎಂದು ರಾಹುಲ್ ಪಾಟೀಲ ಹರ್ಷ ವ್ಯಕ್ತಪಡಿಸಿದರು.

ಒಮ್ಮೊಮ್ಮೆ 18 ಗಂಟೆ ಲೈಬ್ರರಿಯಲ್ಲೇ ಇರ್ತಿದ್ದೆ: "ಪ್ರತಿನಿತ್ಯ 12-14 ಗಂಟೆ ಅಧ್ಯಯನ ಮಾಡುತ್ತಿದ್ದೆ. 8 ಗಂಟೆ ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ. ರಾತ್ರಿ ಹೊತ್ತು 3-4 ಗಂಟೆವರೆಗೆ ಓದುತ್ತಿದ್ದೆ. ಆಮೇಲೆ ಬೆಳಗ್ಗೆ 10 ಗಂಟೆಗೆ ಎದ್ದು, ರೆಡಿ ಆಗಿ ಲೈಬ್ರರಿಗೆ ಹೋಗುತ್ತಿದ್ದೆ. ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದೆ. ಒಮ್ಮೊಮ್ಮೆ 18 ಗಂಟೆ ಲೈಬ್ರರಿಯಲ್ಲೇ ಇರುತ್ತಿದ್ದೆ" ಎಂದು ತಿಳಿಸಿದರು.

ನಾಲ್ಕು ತಿಂಗಳು ಮುಂಚೆಯೇ ಇರಾನ್ ಯುದ್ಧದ ಕುರಿತು ಸಂದರ್ಶನದಲ್ಲಿ ಪ್ರಶ್ನೆ!: "ಶೇ.80-85ರಷ್ಟು ಅಂಕಗಳು ಉತ್ತರ ಬರವಣಿಗೆ (ಆನ್ಸರ್ ರೈಟಿಂಗ್)ಗೆ ಇರುತ್ತದೆ. ಹಾಗಾಗಿ, ಆನ್ಸರ್ ರೈಟಿಂಗ್ ಹೇಗಿರಬೇಕು? ಯಾವ ರೀತಿ ಹೆಚ್ಚಿನ ಅಂಕ ಗಳಿಸಬಹುದು ಎಂಬುದರ ಬಗ್ಗೆ ಒಂದು ವರ್ಷ ತಯಾರಿ ಮಾಡಿದ್ದೆ. ಅದು ಸಹಕಾರಿಯಾಯಿತು. ಸಂದರ್ಶನದಲ್ಲಿ ನನಗೆ ಈ ಬಾರಿ 201 ಅಂಕಗಳು ಬಂದಿದ್ದವು. ಹಿಂದಿನ ಸಲ 155 ಅಂಕ ಪಡೆದುಕೊಂಡಿದ್ದೆ. ಸಂದರ್ಶನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರಿಸಿದೆ. ಹಾಗಾಗಿ, ಈ ಬಾರಿ ಒಳ್ಳೆಯ ಅಂಕಗಳು ಸಿಕ್ಕವು. ಇದೇ ವರ್ಷ ಜನವರಿ 15ರಂದು ಸಂದರ್ಶನ ನಡೆದಿತ್ತು‌‌. ಆ ವೇಳೆ ನಡೆಯುತ್ತಿದ್ದ ವೆನಿಜುವೆಲಾ ಯುದ್ಧದ ಬಗ್ಗೆ ಸಂದರ್ಶನಕಾರರು ಪ್ರಶ್ನೆ ಕೇಳಿದ್ದರು‌. ಅಲ್ಲದೇ, ಇರಾನ್ (ಮಧ್ಯಪ್ರಾಚ್ಯ ರಾಷ್ಟ್ರಗಳ) ಯುದ್ಧದ ಬಗ್ಗೆ ನಾಲ್ಕು ತಿಂಗಳ ಮುಂಚೆಯೇ ಕೇಳಿದ್ದರು. ಜೊತೆಗೆ, ಭಾರತೀಯ ಅರಣ್ಯ ಸೇವೆ, ನನ್ನಿಷ್ಟದ ಕ್ರೀಡೆ ಕ್ರಿಕೆಟ್​ ಬಗ್ಗೆಯೂ ಕೇಳಿದರು. ನಾನು ಉತ್ತರಿಸುವಾಗ ಸಂದರ್ಶನಕಾರರ ಮುಖದಲ್ಲಿ ಸಂತೋಷ ಕಂಡೆ" ಎಂದು ಪಾಟೀಲ ನೆನಪಿಸಿಕೊಂಡರು.

ನಾನು ಪಡೆದಿದ್ದು 980 ಅಂಕ: "ಒಟ್ಟು 2075 ಅಂಕಗಳ ಪೈಕಿ ನಾನು ಪಡೆದಿದ್ದು 980. ಮೊದಲ ರ‍್ಯಾಂಕ್​​ ಪಡೆದವರಿಗೆ 1040 ಅಂಕಗಳು ಬಂದಿವೆ. ನನಗೆ ಸಂತೃಪ್ತಿ‌ ಸಿಕ್ಕಿದೆ. ನಾನು ಈಗಾಗಲೇ ಕರ್ತವ್ಯದಲ್ಲಿದ್ದು, ರಜೆ ಪಡೆದುಕೊಂಡು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ನನ್ನ ಬಳಿ ಈಗಾಗಲೇ ಒಂದು ನೌಕರಿ ಇದೆ ಎಂಬುದು ನನ್ನಲ್ಲಿ ಆತ್ಮವಿಶ್ವಾಸ ತುಂಬಿತ್ತು. ಇದರಿಂದಾಗಿ ಒತ್ತಡ ಇಲ್ಲದೇ ಬಾರಿ ಪರೀಕ್ಷೆ ಬರೆದಿದ್ದೆ" ಎಂದರು.

ಬಡವರನ್ನು ಮೇಲೆತ್ತಲು ಶ್ರಮಿಸುವೆ: "ಡಿಜಿಟಲ್​ ಇಂಟರ್‌ನೆಟ್​ ಬಳಸಿ ಸಾಕಷ್ಟು ಸುಧಾರಣೆ ಮಾಡುವ ಆಲೋಚನೆ ಹೊಂದಿದ್ದೇನೆ. ಮೊದಲಿಗೆ ನಾನು ಸೇವೆಗೆ ಸೇರಿದ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ‌ ತಿಳಿದುಕೊಳ್ಳುತ್ತೇನೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆಯದ್ದೇ ಸಮಸ್ಯೆಗಳು ಇರುತ್ತವೆ. ಹಾಗಾಗಿ, ಅಂಕಿ-ಅಂಶಗಳನ್ನು ಪಡೆದುಕೊಂಡು ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಬಡವರನ್ನು ಮೇಲೆತ್ತಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ" ಎಂದು ರಾಹುಲ್ ಪಾಟೀಲ ಭರವಸೆ ನೀಡಿದರು.

ಬೆಳಗಾವಿ ಡಿಸಿ ಆಗೋದು ನನ್ನ ಆಸೆ: "ಕರ್ನಾಟಕ ಕೇಡರ್ ಕೇಳಿದ್ದೇನೆ. ಅದರಲ್ಲೂ ನನ್ನ ಸ್ವಂತ ಜಿಲ್ಲೆ ಬೆಳಗಾವಿ ಜಿಲ್ಲಾಧಿಕಾರಿ ಆಗುವುದು ನನ್ನ ಆಸೆ. ಆ ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ. ಇದನ್ನು ಹೊರತುಪಡಿಸಿ, ಬೇರೆ ರಾಜ್ಯ ಸಿಕ್ಕರೂ ಅಷ್ಟೇ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇನೆ" ಎಂದು ಹೇಳಿದರು.


Ads on article

Advertise in articles 1

advertising articles 2

Advertise under the article