ನವದೆಹಲಿ :ಮುಂದಿನ 48 ಗಂಟೆಗಳ ಕಾಲ ನೀವು ಎಲ್ಲಿದ್ದೀರೋ ಅಲ್ಲೇ ಇರಿ'; ಇರಾನ್‌ನಲ್ಲಿರುವ ಭಾರತೀಯರಿಗೆ ತುರ್ತು ಸಂದೇಶ...!!!
ನವದೆಹಲಿ: ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಅಮೆರಿಕ ಇರಾನ್‌ಗೆ ನೀಡಿದ ಅಂತಿಮ ಎಚ್ಚರಿಕೆಯ ನಂತರ ಪಶ್ಚಿಮ ಏಷ್ಯಾ ಬಿಕ್ಕಟ್ಟು ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಭಾರತ ಮಂಗಳವಾರ ಇರಾನ್‌ನಲ್ಲಿರುವ ತನ್ನ ಪ್ರಜೆಗಳಿಗೆ ತುರ್ತು ಸಂದೇಶ ರವಾನಿಸಿದೆ. ಮುಂದಿನ 48 ಗಂಟೆಗಳ ಕಾಲ ನೀವು ಎಲ್ಲಿರುವಿರೋ ಎಲ್ಲೇ ಇರಿ ಎಂದು ಸಲಹೆ ನೀಡಿದೆ.
ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಭಾರತೀಯರನ್ನು ಮನೆಯೊಳಗೆಯೇ ಇರುವಂತೆ ಮತ್ತು ಮಿಲಿಟರಿ, ವಿದ್ಯುತ್ ಮೂಲಸೌಕರ್ಯಗಳು ಮತ್ತು ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳನ್ನು ಕಟ್ಟುನಿಟ್ಟಾಗಿ ತಪ್ಪಿಸುವಂತೆ ಸೂಚನೆ ನೀಡಿದೆ
ಹಾರ್ಮುಜ್ ಜಲಸಂಧಿ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ಗೆ ನೀಡಿದ ಅಂತಿಮ ಗಡುವು (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 5:30) ಸಮೀಪಿಸುತ್ತಿದ್ದು, 'ಇಂದು ರಾತ್ರಿ ಇಡೀ ನಾಗರಿಕತೆಯೇ ಸಾಯುತ್ತದೆ' ಎಂದು ಅಮೆರಿಕ ಅಧ್ಯಕ್ಷ ಈಗಾಗಲೇ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸಿದ ವಾಯು ದಾಳಿಗಳ ನಂತರ ಸಂಘರ್ಷ ದಿನ ದಿನವೂ ತೀವ್ರಗೊಳ್ಳುತ್ತಾ ಸಾಗಿದೆ. ಯುದ್ಧ ಪ್ರಾರಂಭವಾದಾಗ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 9,000 ಭಾರತೀಯರು ಇರಾನ್‌ನಲ್ಲಿದ್ದರು ಎಂಬ ಅಧಿಕೃತ ಮಾಹಿತಿ ಇದೆ. ಇಲ್ಲಿಯವರೆಗೆ ಸುಮಾರು 1,800 ಭಾರತೀಯರು ಭಾರತಕ್ಕೆ ಮರಳಿದ್ದಾರೆ.