ಕೇರಳ :ಮೊಬೈಲ್ ಕಳವು ಶಂಕೆ ಮೇಲೆ ವಲಸೆ ಕಾರ್ಮಿಕನ ಹೊಡೆದು ಕೊಂದ 6 ಜನರ ಗುಂಪು...!!
ಎರ್ನಾಕುಲಂ(ಕೇರಳ): ಮೊಬೈಲ್ ಕಳ್ಳತನದ ಶಂಕೆಯ ಮೇಲೆ ಅಸ್ಸಾಂನ ವಲಸೆ ಕಾರ್ಮಿಕನನ್ನು, ಅದೇ ರಾಜ್ಯದ ಆರು ಮಂದಿ ವಲಸೆ ಕಾರ್ಮಿಕರು ಭೀಕರವಾಗಿ ಥಳಿಸಿ ಹತ್ಯೆ ಮಾಡಿದ್ದಾರೆ.
ಪೆರುಂಬವೂರ್ ಬಳಿಯ ಮುಡಿಕಲ್‌ನಲ್ಲಿರುವ ಪ್ಲೈವುಡ್ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಕೊಲೆಯ ನಂತರ, ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನೂರ್ ಹಸನ್ ಕೊಲೆಯಾದ ವಲಸೆ ಕಾರ್ಮಿಕ. ಅಲಾವುದ್ದೀನ್, ಮಿನಾರುಲ್, ಜಾಕಿರ್ ಹುಸೇನ್, ಹಬೀಸುದ್ದೀನ್, ಹಸನ್ ಅಲಿ ಮತ್ತು ಮುಜಮ್ಮಿಲ್ ಕೊಲೆ ಆರೋಪಿಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಮೂವರು ಸಹೋದರರು ಎಂದು ತಿಳಿದುಬಂದಿದ್ದಾಗಿ ಪೆರುಂಬವೂರ್ ಪೊಲೀಸರು ಹೇಳಿದ್ದಾರೆ.
ಕಳ್ಳತನದ ಶಂಕೆ ಮೇಲೆ ಮಾರಕ ಹಲ್ಲೆ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಎಲ್ಲಾ ಕಾರ್ಮಿಕರು ಕೆಲಸಕ್ಕೆ ಹೋಗುವ ಮೊದಲು ತಮ್ಮ ಮೊಬೈಲ್ ಫೋನ್‌ಗಳನ್ನು ತಮ್ಮ ಕೋಣೆಯಲ್ಲಿ ಒಂದೇ ಬಕೆಟ್‌ನಲ್ಲಿ ಇಡುವುದು ವಾಡಿಕೆಯಾಗಿತ್ತು. ಅದರಂತೆ, ತಾವು ನೆಲೆಸಿದ್ದ ಮನೆಯಲ್ಲಿ ಮೊಬೈಲ್ ಇಟ್ಟಿದ್ದರು. ಸಂಜೆ ಹಿಂತಿರುಗಿದಾಗ, ಏಳು ಮೊಬೈಲ್ ಫೋನ್‌ಗಳು ಮತ್ತು 1 ಲಕ್ಷ ರೂಪಾಯಿ ನಗದು ಕದಿಯಲು ಹತ್ಯೆಯಾದ ನೂರ್ ಹಸನ್ ಪ್ರಯತ್ನಿಸುತ್ತಿದ್ದ. ಇತರ ಯುವಕರು ಆತನನ್ನು ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಅವರ ಕೋಣೆಯಲ್ಲಿಯೇ ಎಲ್ಲರೂ ಸೇರಿ ಮಾರಕ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಕಿರುಚಾಟ ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು: ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನು ಎಲ್ಲರೂ ಸೇರಿ ಕೋಣೆಯಲ್ಲಿ ಥಳಿಸುತ್ತಿದ್ದಾಗ, ಬಲಿಪಶುವಿನ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಸ್ಥಳಕ್ಕೆ ತೆರಳಿ ನೋಡಿದಾಗ, ಕಾರ್ಮಿಕನನ್ನು ಮರದ ರೋಲರ್‌ನಿಂದ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು. ಇದರಿಂದ ಆತನ ತಲೆ ಛಿದ್ರವಾಗಿತ್ತು. ಹಲ್ಲುಗಳು ಮತ್ತು ಪಕ್ಕೆಲುಬುಗಳು ಮುರಿದಿದ್ದವು. ಗಂಭೀರವಾದ ಗಾಯಗೊಂಡಿದ್ದ ಆತನನ್ನು ಪೆರುಂಬವೂರ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಪೆರುಂಬವೂರ್ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸರ ತಂಡವು ಅಪರಾಧ ಸ್ಥಳ ಮತ್ತು ಹಲ್ಲೆ ನಡೆದ ಕೋಣೆಯ ಸಮಗ್ರ ಪರಿಶೀಲನೆ ನಡೆಸಿತು. ಮೃತರ ಶವವನ್ನು ಪ್ರಸ್ತುತ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಿಚಾರಣೆಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಸ್ಸೆರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಬಂಧಿತ ಆರೋಪಿಗಳಿಗೆ ಅಪರಾಧ ಹಿನ್ನೆಲೆ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಪ್ಲೈವುಡ್ ಕಂಪನಿಯ ಆಡಳಿತ ಮಂಡಳಿ ಮತ್ತು ಇತರ ಕಾರ್ಮಿಕರಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ವಲಸೆ ಕಾರ್ಮಿಕರ ಮೇಲೆ ಹೆಚ್ಚಿದ ದಾಳಿ: ರಾಜ್ಯದಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲೆ ದಾಳಿ ಹೆಚ್ಚುತ್ತಿವೆ. ಸಣ್ಣಪುಟ್ಟ ಕಾರಣಗಳಿಗೆ ಮಾರಕ ದಾಳಿ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಪೊಲೀಸರು ಹೇಲಿದ್ದಾರೆ. ವಲಸೆ ಕಾರ್ಮಿಕರ ಮೇಲಿನ ದಾಳಿಯನ್ನು ತಡೆಗಟ್ಟುವ ಸಲುವಾಗಿ ಅವರ ಕೆಲಸದ ಸ್ಥಳಗಳು ಮತ್ತು ವಸತಿ ಶಿಬಿರಗಳಲ್ಲಿ ನಿಯಮಿತ ತಪಾಸಣೆಗಳನ್ನು ತೀವ್ರಗೊಳಿಸುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.