ಬೆಳಗಾವಿ :ರೈತರ ಮೇಲೂ ಯುದ್ಧದ ಎಫೆಕ್ಟ್: ಕೈ ಕೊಟ್ಟ ದರ, ರೂಟರ್ ಹೊಡೆದು ಕ್ಯಾಬೇಜ್ ನಾಶಪಡಿಸುತ್ತಿರುವ ರೈತರು...!!!
ಬೆಳಗಾವಿ : ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ, ಜಿಲ್ಲೆಯ ತರಕಾರಿ ಬೆಳೆಗಾರರ ಮೇಲೂ ಪರಿಣಾಮ ಬೀರಿದೆ. ಇಲ್ಲಿನ ಕಡೋಲಿ, ಜಾಫರವಾಡಿ, ಗೌಂಡವಾಡ, ಬೆಳಗುಂದಿ, ಹಂದಿಗುಂದ, ಯಳ್ಳೂರ, ಉಚಗಾಂವ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಬೆಳೆದ ಕ್ಯಾಬೇಜ್ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ರೈತರು ತಮ್ಮ ಕೈಯ್ಯಾರೆ ಬೆಳೆಸಿದ ಕ್ಯಾಬೇಜ್ ಬೆಳೆಯನ್ನು ರೂಟರ್ ಹೊಡೆದು ನಾಶಪಡಿಸುತ್ತಿದ್ದಾರೆ.
ಹೌದು, ಸಗಟು ಮಾರುಕಟ್ಟೆಯಲ್ಲಿ 70 ಕೆಜಿಯ ಒಂದು ಚೀಲ ಕ್ಯಾಬೇಜ್ಗೆ ಕೇವಲ 100 ರೂ. ದರ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 1 ರಿಂದ 2 ರೂ. ಮಾತ್ರ ಸಿಗುತ್ತಿದೆ. ಮೂರು ತಿಂಗಳ ಹಿಂದೆ ಪ್ರತಿ ಕೆಜಿಗೆ 40 ರಿಂದ 50 ರೂ. ಸಿಗುತ್ತಿತ್ತು. ಯುದ್ಧ ಶುರುವಾದ 15 ದಿನಗಳ ಬಳಿಕ ಇದರ ದರ ಕ್ರಮೇಣ ಕುಸಿಯುತ್ತ ಹೋಯಿತು.

ರೈತ ಅಪ್ಪಾಸಾಹೇಬ ದೇಸಾಯಿ ಅವರು ಮಾತನಾಡಿದ್ದು, 'ಹೊಟ್ಟೆಯಲ್ಲಿ ಸಂಕಟ ಆಗುತ್ತಿದೆ. ಹೊಟ್ಟೆಯಲ್ಲಿ ಬೆಂಕಿಯೂ ಬಿದ್ದಿದೆ. ಸಿಟ್ಟೂ ಬರುತ್ತಿದೆ. ಅಂತಿಮವಾಗಿ ಕ್ಯಾಬೇಜ್ ಹಾಳು ಮಾಡಿ ಇದೆಲ್ಲವನ್ನೂ ತೀರಿಸಿಕೊಳ್ಳುತ್ತಿದ್ದೇವೆ. ಮನೆಯಲ್ಲಿ ಮಗ ಹೇಗೆ ಅಭ್ಯಾಸ ಮಾಡುತ್ತಿದ್ದಾನೆ? ಮನೆಯಲ್ಲಿ ಏನಾಗಿದೆ ಅಂತಾ ನೋಡದೇ, ಬೆಳಗ್ಗೆ ಎದ್ದ ಕೂಡಲೇ ಹೊಲಕ್ಕೆ ಬಂದು, ತನ್ನ ಬೆಳೆ ಬೆಳೆಸುವುದರಲ್ಲೇ ರೈತ ಹೆಚ್ಚು ಶ್ರಮ, ಸಮಯ ಕೊಡುತ್ತಾನೆ. ಆದರೆ, ಆತನು ಬೆಳೆದ ಬೆಳೆಗೆ ಬೆಲೆ ಸಿಗದೇ ಇರುವುದು ದೊಡ್ಡ ದುರಂತ. ಕೆಲವೊಂದಿಷ್ಟು ರೈತರು ರೂಟರ್ ಹೊಡೆದರೆ, ಮತ್ತೊಂದಿಷ್ಟು ರೈತರು ಕುರಿ ಮೇಯಿಸಿ ಕ್ಯಾಬೇಜ್ ನಾಶಪಡಿಸುತ್ತಿದ್ದಾರೆ' ಎಂದಿದ್ದಾರೆ.
'ನಮ್ಮೂರಲ್ಲಿ ತುಂಡು ಭೂಮಿ ಹೊಂದಿರುವ ರೈತರೇ ಹೆಚ್ಚಿದ್ದಾರೆ. ಹೀಗಾಗಿ, ಬಹುತೇಕರು ಎರಡು ಮೂರು ತಿಂಗಳಲ್ಲಿ ಬರುವ ತರಕಾರಿ ಬೆಳೆಯುತ್ತಾರೆ. ದರ ಕೈ ಕೊಟ್ಟರೆ, ಹಾಕಿದ ಬಂಡವಾಳ ಬರದಿದ್ದರೆ ರೈತ ಸಾಲಗಾರ ಆಗುತ್ತಾನೆ. ಸಾಲಕ್ಕೆ ಹೆದರಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇನ್ನು ತರಕಾರಿ ದರ ಒಂದು ರೀತಿ ಲಾಟರಿ ಆಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಬೆಳೆ ಹಾನಿಗೆ ಪರಿಹಾರ ನೀಡಬೇಕು. ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು' ಎಂದು ಆಗ್ರಹಿಸಿದ್ದಾರೆ.
'ನರ್ಸರಿಗಳಿಂದ 60 ಪೈಸೆಗೆ ಒಂದರಂತೆ ಸಸಿ ತಂದು ನೆಟ್ಟಿದ್ದೇವೆ. 1 ಎಕರೆಗೆ 32 ಸಾವಿರ ಸಸಿ ಬೇಕು. ಗಾಡಿ ಬಾಡಿಗೆ ಸೇರಿ 20 ಸಾವಿರ ಸಸಿಗೇ ಕೊಟ್ಟಿದ್ದೇವೆ. ಗೊಬ್ಬರ, ಕೀಟನಾಶಕ, ಆಳುಗಳ ಕೂಲಿ, ನೀರಾವರಿ ಬಳಕೆ ಸೇರಿ ಪ್ರತಿ ಎಕರೆಗೆ 45-50 ಸಾವಿರ ರೂ. ಖರ್ಚಾಗಿದೆ. ಎರಡು ಎಕರೆಯಲ್ಲಿ ಕ್ಯಾಬೇಜ್ ಬೆಳೆದಿದ್ದೆ. ಕನಿಷ್ಠ ಎರಡು ಲಕ್ಷ ರೂ ಆದರೂ ಸಿಗುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಯುದ್ಧದಿಂದಾಗಿ ವ್ಯಾಪಾರಿಗಳು ಕ್ಯಾಬೇಜ್ ಮಾರಾಟಕ್ಕೆ ತರಬೇಡಿ ಎನ್ನುತ್ತಿದ್ದಾರೆ. ಹಾಗಾಗಿ, ಬೆಳೆ ನಾಶಪಡಿಸುತ್ತಿದ್ದೇವೆ. ಸರ್ಕಾರ ಬೆಳೆ ಹಾನಿ ಪರಿಹಾರ ಕೊಟ್ಟು ನಮ್ಮನ್ನು ಕಾಪಾಡಬೇಕು' ಅಂತಾ ಮತ್ತೋರ್ವ ರೈತ ಮೋಹನ ಕಡೆಮನಿ ಮನವಿ ಮಾಡಿಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ ಅವರು ಮಾತನಾಡಿ, 'ಬೆಳಗಾವಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ 35 ಸಾವಿರ ಹೆಕ್ಟೇರ್‌ನಲ್ಲಿ ತರಕಾರಿ ಬೆಳೆಯಲಾಗುತ್ತದೆ. ಬೇಸಿಗೆಯಲ್ಲೂ ಜಿಲ್ಲೆಯಲ್ಲಿ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗಿದೆ. ಮಳೆಗಾಲ ಮತ್ತು ಚಳಿಗಾಲದ ವೇಳೆ ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್, ಬೇಸಿಗೆಯಲ್ಲಿ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕ್ಯಾಬೇಜ್ ಬೆಳೆಯಲಾಗುತ್ತದೆ. ಯುದ್ಧ ನಡೆಯುತ್ತಿರುವುದರಿಂದಾಗಿ ಬೇಡಿಕೆ ಇಲ್ಲದಾಗಿದೆ. ಹಾಗಾಗಿ, ದರ ಕುಸಿತದ ಕಾರಣ ಸಂಕಷ್ಟ ಎದುರಾಗಿದ್ದು, ರೈತರು ಬೆಳೆ ನಾಶ ಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ರೈತರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಲಾಗುವುದು. ರೈತರ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು' ಎಂದಿದ್ದಾರೆ.