ಹರಿಯಾಣ :ಮಂಗಳೂರಿನ ಎಂಜಿನಿಯರ್ ಯುವತಿಯನ್ನು ಮದುವೆಯಾದ ಮಹಾಕುಂಭಮೇಳದ 'IIT ಬಾಬ...!!
ಹರಿಯಾಣ: ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ 'ಐಐಟಿ ಬಾಬಾ' ಅಭಯ್ ಸಿಂಗ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕುಟುಂಬ ಮತ್ತು ವೃತ್ತಿಯನ್ನು ತೊರೆದು ಬಾಬಾ ಆಗಿದ್ದ ಅವರು ಇದೀಗ, ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಹೌದು. ಐಐಟಿಯನ್ ಬಾಬಾ ಅಭಯ್ ಸಿಂಗ್ ಅವರು ಕರ್ನಾಟಕದ ಮಂಗಳೂರಿನ ಎಂಜಿನಿಯರ್ ಪ್ರತೀಕಾ ಅವರನ್ನು ವಿವಾಹವಾಗಿದ್ದಾರೆ. ದಂಪತಿ ಕುಟುಂಬಸ್ಥರು ವಾಸವಾಗಿರುವ ಝಜ್ಜರ್ ಜಿಲ್ಲೆಯ ಸಸೌಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಮನೆಗೆ ಬಂದ ಪುತ್ರ ಮತ್ತು ಸೊಸೆಗೆ ಪೋಷಕರು ಆಶೀರ್ವಾದ ಮಾಡಿದ್ದಾರೆ.
ದೇವಸ್ಥಾನದಲ್ಲಿ ಸರಳ ಮದುವೆ: ಐಐಟಿ ಬಾಬಾ ಅಭಯ್ ಸಿಂಗ್ ಮತ್ತು ಪ್ರತೀಕಾ ಅವರು, ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ಖನ್ಯಾರಾದಲ್ಲಿರುವ ಅಘಂಜರ್ ಮಹಾದೇವ್ ದೇವಸ್ಥಾನದಲ್ಲಿ ಫೆಬ್ರವರಿ 15ರಂದು ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ವಿವಾಹವಾಗಿದ್ದಾರೆ.
ಫೆಬ್ರವರಿ 19ರಂದು ದಂಪತಿಯು ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಪ್ರತೀಕಾ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಪ್ರಸ್ತುತ, ದಂಪತಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವಾಸಿಸುತ್ತಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ಐಐಟಿ ಬಾಬಾ ಮತ್ತು ಅವರ ಪತ್ನಿಗೆ ಗ್ರಾಮಸ್ಥರು, ಕುಟುಂಬಸ್ಥರು ಆತ್ಮೀಯ ಸ್ವಾಗತ ನೀಡಿದ್ದಾರೆ. ಅಭಯ್ ಸಿಂಗ್ ಅವರ ತಂದೆ ಕರಣ್ ಸಿಂಗ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ತಾಯಿ ಶೀಲಾ ದೇವಿ ದಂಪತಿಯ ಹಣೆಗೆ ತಿಲಕ ಹಚ್ಚಿ, ಆರತಿ ಬೆಳಗಿ, ಸಿಹಿ ತಿನ್ನಿಸಿ ಸೊಸೆಯನ್ನು ಸಾಂಪ್ರದಾಯಿಕ 'ಗೃಹ ಪ್ರವೇಶ' ಮಾಡಿಸಿದ್ದಾರೆ.
ದಂಪತಿಯ ಪ್ರತಿಕ್ರಿಯೆ: ಐಐಟಿ ಬಾಬಾ ಅಭಯ್ ಮತ್ತು ಪತ್ನಿ ಪ್ರತೀಕಾ ಅವರು ತಮ್ಮ ವಿವಾಹ ಮತ್ತು ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫೆಬ್ರವರಿಯಲ್ಲಿ ಸರಳವಾಗಿ ವಿವಾಹವಾದೆವು. ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಭಯ್ ಸಿಂಗ್ ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡು, ಆಧುನಿಕ ಶಿಕ್ಷಣವನ್ನು ಆಧ್ಯಾತ್ಮಿಕ ಅಭ್ಯಾಸ ಮತ್ತು ಸಾಂಪ್ರದಾಯಿಕ ಬುದ್ಧಿವಂತಿಕೆಯೊಂದಿಗೆ ಸಂಯೋಜಿಸುವ 'ಸನಾತನ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸುವತ್ತ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಅಭಯ್ ಸಿಂಗ್ ಐಐಟಿ ಬಾಬಾ ಆಗಿದ್ದೇಗೆ?: ಅಭಯ್ ಸಿಂಗ್ ಬಾಲ್ಯದಲ್ಲಿ ಶೈಕ್ಷಣಿಕವಾಗಿ ಪ್ರತಿಭಾನ್ವಿತರಾಗಿದ್ದರು. ದೆಹಲಿಯಲ್ಲಿ ಐಐಟಿ ಪರೀಕ್ಷೆಗಳಿಗೆ ತರಬೇತಿ ಪಡೆದು, ಪರೀಕ್ಷೆಯನ್ನೂ ಪಾಸು ಮಾಡಿ ಐಐಟಿ ಬಾಂಬೆಗೆ ಪ್ರವೇಶ ಪಡೆದಿದ್ದರು. ಅಭಯ್ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವೀಧರ. ನಂತರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತರುವಾಯ, ಕೆನಡಾಕ್ಕೂ ತೆರಳಿದ್ದರು. ಅಲ್ಲಿ ವಿಮಾನ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಕೊರೊನಾದಿಂದಾಗಿ ಲಾಕ್ಡೌನ್ ಹೇರಿದ್ದರಿಂದ 2021ರಲ್ಲಿ ಭಾರತಕ್ಕೆ ಮರಳಿದ್ದರು.

ಇದರ ನಂತರ ಅವರು ಕುಟುಂಬದಿಂದ ಹಠಾತ್ತನೆ ದೂರವಾದರು. ಇತ್ತ, ಕುಟುಂಬಸ್ಥರು ಅವರನ್ನು ಪತ್ತೆಹಚ್ಚಲು ಪ್ರಯತ್ನ ಮಾಡಿದರು. ಕಾಶಿಯಲ್ಲಿ ತಮ್ಮ ಗುರು ಸೋಮೇಶ್ವರ ಪುರಿಯನ್ನು ಭೇಟಿಯಾದರು. ಅಲ್ಲಿಯೇ ಇದ್ದ ಅಭಯ್ ಅವರು 2025ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದಲ್ಲಿ ಕಾಣಿಸಿಕೊಂಡರು. ಮೇಳದಲ್ಲಿ ಜನರು ಅವರನ್ನು 'ಐಐಟಿ ಬಾಬಾ' ಎಂದು ಕರೆಯಲು ಪ್ರಾರಂಭಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದ ಐಐಟಿಯನ್ ಬಾಬಾ ನಂತರ ವಿವಾದಗಳಲ್ಲಿ ಸಿಲುಕಿಕೊಂಡರು. ತಮ್ಮ ಗುರುಗಳ ವಿರುದ್ಧವೇ ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಎಂಬ ಆರೋಪದ ನಂತರ ಅವರನ್ನು ಜುನಾ ಅಖಾಡಾದಿಂದ ಹೊರಹಾಕಲಾಯಿತು. ನಂತರ ಅವರು ಟಿವಿ ಚರ್ಚೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಗಾಂಜಾ ಹೊಂದಿದ್ದ ಆರೋಪದ ಮೇಲೆ ಜೈಪುರ ಪೊಲೀಸರು ಐಐಟಿಯನ್ ಬಾಬಾನನ್ನು ವಶಕ್ಕೆ ಪಡೆದಿದ್ದರು.