ತಮಿಳುನಾಡು :ಸರ್ಕಾರ ರಚನೆ ಟೆನ್ಷನ್: 24 ತಾಸಲ್ಲಿ 3 ಬಾರಿ ರಾಜ್ಯಪಾಲರ ಭೇಟಿಯಾದ ವಿಜಯ್..
ಚೆನ್ನೈ(ತಮಿಳುನಾಡು): ರಾಜ್ಯ ರಾಜಕೀಯದ ವಿದ್ಯಮಾನಗಳು ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಮೂಡಿದ ಅತಂತ್ರ ಸ್ಥಿತಿ, ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ಅವರ ಟಿವಿಕೆ ಪಕ್ಷವನ್ನೂ ಅತಂತ್ರವನ್ನಾಗಿ ಮಾಡಿದೆ.
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಟಿವಿಕೆ ಪಕ್ಷದ ಸಂಸ್ಥಾಪಕ ಮುಖ್ಯಸ್ಥ ವಿಜಯ್ ಅವರು 24 ತಾಸಿನಲ್ಲಿ ಮೂರು ಬಾರಿ ಭೇಟಿಯಾಗಿ ಸರ್ಕಾರ ರಚನೆಯ ಕಸರತ್ತು ನಡೆಸಿದ್ದಾರೆ. ಆದರೆ, ಬಹುಮತದ ಸಂಖ್ಯೆಯನ್ನು ದೃಢೀಕರಿಸಲು ರಾಜ್ಯಪಾಲರು ನಟ/ರಾಜಕಾರಣಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರು ಬಾರಿಯ ಭೇಟಿ ಮತ್ತು ಮಾತುಕತೆಯಲ್ಲಿ ರಾಜ್ಯಪಾಲ ವಿಜಯ್ ಅರ್ಲೇಕರ್ ಅವರು ಟಿವಿಕೆ ಸಂಸ್ಥಾಪಕರನ್ನು ಸರ್ಕಾರ ರಚಿಸಲು ಅನುಮತಿ ನೀಡಿದ್ದಾರೋ ಅಥವಾ ಇಲ್ಲವೇ ಎಂಬುದರ ಕುರಿತು ಅಧಿಕಾರಿಗಳು ಅಥವಾ ಟಿವಿಕೆಯಿಂದ ತಕ್ಷಣದ ಮಾಹಿತಿ ಬಂದಿಲ್ಲ.
ಇಂದು ಬೆಳಗ್ಗೆ ಲೋಕ ಭವನಕ್ಕೆ ಎರಡನೇ ಬಾರಿ ಭೇಟಿ ನೀಡಿದ ಟಿವಿಕೆ ಮುಖ್ಯಸ್ಥ ವಿಜಯ್ ಸುಮಾರು 40 ನಿಮಿಷಗಳ ಕಾಲ ರಾಜ್ಯಪಾಲರ ಭವನದೊಳಗೆ ಇದ್ದರು. ನಂತರ ಅವರು ಅಲ್ಲಿಂದ ಹೊರನಡೆದರು. ಬಳಿಕ ಮತ್ತೆ ಅವರು ರಾಜಭವನಕ್ಕೆ ಆಗಮಿಸಿ, ವಾಪಸ್ ತೆರಳಿದರು.
ಸಿಗುತ್ತಿಲ್ಲ 'ಮ್ಯಾಜಿಕ್' ನಂಬರ್: 234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಈಗಾಗಲೇ ಟಿವಿಕೆಗೆ ಬೆಂಬಲ ಘೋಷಿಸಿದೆ. ಇದರಿಂದ, ಸದ್ಯ ಟಿವಿಕೆ ಬಲವು 113 ಆಗಿದೆ. ಬಹುಮತಕ್ಕೆ 118 ಸ್ಥಾನ ಬೇಕಿದೆ.
ದ್ರಾವಿಡ ಪಕ್ಷಗಳಾದ ಡಿಎಂಕೆ ಹಾಗೂ ಎಡಿಎಂಕೆ ನಟ ವಿಜಯ್ಗೆ ಬೆಂಬಲ ನೀಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಎಡಿಎಂಕೆ ತನ್ನೆಲ್ಲಾ ಶಾಸಕರನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಸ್ಥಳಾಂತರಿಸಿ ರೆಸಾರ್ಟ್ ರಾಜಕಾರಣ ಆರಂಭಿಸಿದೆ.
ಇತ್ತ ಡಿಎಂಕೆ ಕೂಡ, ಯಾವುದೇ ಕಾರಣಕ್ಕೂ ನಮ್ಮ ಪಕ್ಷವು ವಿಜಯ್ಗೆ ಬೆಂಬಲ ನೀಡುವುದಿಲ್ಲ. 6 ತಿಂಗಳು ಕಾದು ನೋಡಲಾಗುವುದು. ಟಿವಿಕೆ ಸರ್ಕಾರ ರಚಿಸಲು ನಾವು ಅಡ್ಡಿಯಾಗುವುದಿಲ್ಲ ಎಂದು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಪ್ರಮಾಣವಚನ ಮುಂದೂಡಿಕೆ: ಬಹುಮತ ಪಡೆಯಲು ವಿಜಯ್ ನಡೆಸುತ್ತಿರುವ ಕಸರತ್ತು ಫಲ ನೀಡುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಇಂದು ನಡೆಯಬೇಕಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಮ್ಮ ನೆಚ್ಚಿನ ನಾಯಕ ರಾಜ್ಯದ ಸಿಎಂ ಆಗಿ ಪ್ರಮಾಣ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಟಿವಿಕೆ ನಾಯಕ ವಿ.ಎಸ್.ಬಾಬು, "ಬಹುಮತ ಮತ್ತು ಪ್ರಮಾಣ ಸ್ವೀಕಾರ ಕಾರ್ಯಕ್ರಮದ ಬಗ್ಗೆ ಶೀಘ್ರದಲ್ಲೇ ನಿರ್ಣಯವಾಗಲಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಿ" ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಭಿತ್ತರವಾಗುತ್ತರುವಂತೆ, ಡಿಎಂಕೆಯ ಮಿತ್ರಪಕ್ಷಗಳು ವಿಜಯ್ಗೆ ಬೆಂಬಲ ನೀಡಿವೆ ಎಂದು ವರದಿಯಾಗುತ್ತಿದೆ. ಸಿಪಿಐ, ಪಿಎಂಕೆ, ಇತರ ಸಣ್ಣಪುಟ್ಟ ಪಕ್ಷಗಳು ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಹೀಗಾಗಿ ವಿಜಯ್ಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಬೇಕು ಎಂದು ಕೋರಿದ್ದಾಗಿ ತಿಳಿದುಬಂದಿದೆ.