ಬೆಳಗಾವಿ :ಬಿಸಿಲಿನಿಂದ ಪಾರಾಗಲು ಟ್ರಾಫಿಕ್ ಸಿಗ್ನಲ್ನಲ್ಲಿ ನೆರಳಿನ ವ್ಯವಸ್ಥೆ: ಪಾಲಿಕೆ ವಿನೂತನ ಕಾರ್ಯಕ್ಕೆ ಬೆಳಗಾವಿ ಮಂದಿ ಮೆಚ್ಚುಗೆ.
ಬೆಳಗಾವಿ: ರಣ ಬಿಸಿಲಿಗೆ ಬೆಳಗಾವಿ ಜನರು ಬೆಂದು ಹೋಗುತ್ತಿದ್ದಾರೆ. ಕಾಯ್ದ ರಸ್ತೆಗಳ ಮೇಲೆ ಓಡಾಡುವುದೇ ದುಸ್ಥರವಾಗಿದೆ. ಇದನ್ನರಿತ ಮಹಾನಗರ ಪಾಲಿಕೆ ವಿನೂತನ ಕ್ರಮಕ್ಕೆ ಮುಂದಾಗಿದ್ದು, ಟ್ರಾಫಿಕ್ ಸಿಗ್ನಲ್ನಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದೆ.
ಬೆಳಗಾವಿ ನಗರದ ಹೃದಯಭಾಗ ರಾಣಿ ಚನ್ನಮ್ಮ ವೃತ್ತದ ಎರಡು ಕಡೆ ಸಿಗ್ನಲ್ಗಳಲ್ಲಿ ಹಸಿರು ಟಾರ್ಪೆಲ್ ಮೂಲಕ ನೆರಳು ಹಾಕಲಾಗಿದೆ. ಇದರಿಂದ ಸಿಗ್ನಲ್ನಲ್ಲಿ ನಿಲ್ಲುವ ಬೈಕ್ ಸವಾರರು ಗ್ರೀನ್ ಸಿಗ್ನಲ್ ಬರೋವರೆಗೂ ಕೆಲ ಹೊತ್ತು ನೆರಳಲ್ಲಿ ನಿಂತು ರಿಲ್ಯಾಕ್ಸ್ ಆಗುತ್ತಿದ್ದಾರೆ.
ಬಿಸಿಲಿನ ಶಾಖದಿಂದ ಸಿಗ್ನಲ್ಗಳಲ್ಲಿ ಸಾರ್ವಜನಿಕರು ನಿಲ್ಲಲು ಪ್ರಯಾಸ ಪಡುತ್ತಿದ್ದರು. ಯಾವಾಗ ಗ್ರೀನ್ ಸಿಗ್ನಲ್ ಬರುತ್ತೋ ಅಂತಾ ಬಾಯಿ ಬಾಯಿ ಬಿಡುವುದಾಗಿತ್ತು. ಇಲ್ಲದಿದ್ದರೆ ದೂರದಲ್ಲೇ ಮರದ ಕೆಳಗೆ ತಮ್ಮ ವಾಹನ ನಿಲ್ಲಿಸುತ್ತಿದ್ದರು. ಇದೆಲ್ಲಾ ಗಮನಿಸಿದ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಅವರು, ಪಾಲಿಕೆ ಅನುದಾನದಲ್ಲಿ ಪ್ರಾಯೋಗಿಕವಾಗಿ ರಾಣಿ ಚನ್ನಮ್ಮ ವೃತ್ತದ ಎರಡು ಕಡೆ ನೆರಳಿನ ಚಪ್ಪರ ಹಾಕಿಸಿದ್ದಾರೆ. ಮುಂದೆ ನಗರದ ಎಲ್ಲಾ ಸಿಗ್ನಲ್ಗಳಲ್ಲಿ ಈ ರೀತಿ ನೆರಳಿನ ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಈ ಮೊದಲು ಪಾಲಿಕೆ ಆಯುಕ್ತರಿಗೆ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಟ್ರಾಫಿಕ್ ಸಿಗ್ನಲ್ಗಳಲ್ಲಿ ಈ ರೀತಿ ನೆರಳಿನ ವ್ಯವಸ್ಥೆ ಮಾಡುವಂತೆ ಶಿಫಾರಸ್ಸು ಮಾಡಿದ್ದರು. ಈಗ ಅದು ಅನುಷ್ಠಾನಕ್ಕೆ ಬಂದಿದ್ದು, ಚನ್ನಮ್ಮ ವೃತ್ತದ ಬಳಿ ಹಾಕಿರುವ ನೆರಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ನಗರದ ಎಲ್ಲಾ ಸಿಗ್ನಲ್ಗಳಲ್ಲೂ ಈ ರೀತಿ ಗ್ರೀನ್ ಟೆಂಟ್ ಹಾಕಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ಕೋರಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಹಿರಿಯ ನಾಗರಿಕರಾದ ಎಂ.ಆರ್.ವಾರಿಮನಿ, ನನಗೆ ಈಗ 78, ಮುಪ್ಪಿನ ವಯಸ್ಸು. ಸುಡು ಬಿಸಿಲಿನಲ್ಲಿ ಓಡಾಡಲು ಬಹಳಷ್ಟು ಕಷ್ಟ ಆಗುತ್ತಿತ್ತು. ದೂರದಲ್ಲೇ ಮರದ ಕೆಳಗೆ ನಿಂತು, ಸಿಗ್ನಲ್ ಬಿಡುತ್ತಿದ್ದಂತೆ ರಸ್ತೆ ದಾಟುತ್ತಿದ್ದೆವು. ಈಗ ಈ ನೆರಳಲ್ಲಿ ಆರಾಮವಾಗಿ ನಿಲ್ಲುತ್ತಿದ್ದೇವೆ. ಪಾಲಿಕೆ ಮತ್ತು ಪೊಲೀಸ್ ಆಯುಕ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

