ಧಾರವಾಡ :ನೀರಿನ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು; ಸಮುದ್ರದಲೆಗೆ ಸಿಲುಕಿ ಇಬ್ಬರು ಯುವಕರು ಸಾವು...!!sea dawn people death
ಧಾರವಾಡ: ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ಇಬ್ಬರು ಬಾಲಕರು ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟರೆ, ಕಾರವಾರದಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.
ಮನಸೂರ ಗ್ರಾಮದಲ್ಲಿ ನಿನ್ನೆ ಸಂಜೆ ವೇಳೆ ಇಬ್ಬರು ಬಾಲಕರು ಆಟವಾಡುತ್ತಾ ನೀರಿನ ಗುಂಡಿಯ ಬಳಿ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ಕುಮಾರ ನಿಂಗಪ್ಪ ಮುದಕಣ್ಣವರ ಮತ್ತು ಪ್ರಥಮ ಸುರೇಶ ಉಳ್ಳಾಗಡ್ಡಿ ಮೃತಪಟ್ಟ ಬಾಲಕರು.
ರಾತ್ರಿ ವೇಳೆ ಗುಂಡಿಯಲ್ಲಿ ಬಿದ್ದಿದ್ದು ಸ್ಥಳೀಯರಿಂದ ಮನೆಯವರಿಗೆ ಗೊತ್ತಾಗಿದೆ. ಇಬ್ಬರು ಬಾಲಕರ ಮೃತದೇಹವನ್ನು ಗ್ರಾಮಸ್ಥರು ಹೊರತೆಗೆದಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಆಗಮಿಸಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಮಾರ ನಿಂಗಪ್ಪ ಮುದಕಣ್ಣವರ ಮನಸೂರಿನ ಬಾಲಕನಾಗಿದ್ದು, ಪ್ರಥಮ ಉಳ್ಳಾಗಡ್ಡಿ ಎಂಬಾತ ಧಾರವಾಡದ ಸತ್ತೂರಿನವನು. ರಜೆಗೆ ಮನಸೂರಿಗೆ ಬಂದಿದ್ದ ಎನ್ನಲಾಗಿದೆ. ಇಬ್ಬರು ಬಾಲಕರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಮುದ್ರದ ಅಲೆಗೆ ಸಿಲುಕಿ ಇಬ್ಬರು ಜಲಸಮಾಧಿ: ಕಾರವಾರದ ಪ್ರಸಿದ್ಧ ಪ್ರವಾಸಿ ತಾಣವಾದ ಮುಂಡಳ್ಳಿ ನಸ್ತಾರ್ ಬೀಚ್‌ನಲ್ಲಿ ಬುಧವಾರ ಸಂಜೆ ಅರಬ್ಬಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಫ್ರೋಜ್ (34) ಮತ್ತು ರಿಜ್ವಾನ್ ಅಹ್ಮದ್ ಸಾಕೀರ್ (27) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಗಾರ್ಮೆಂಟ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಏಳು ಜನರ ತಂಡವೊಂದು ವಾಯುವಿಹಾರಕ್ಕಾಗಿ ನಸ್ತಾರ್ ಬೀಚ್‌ಗೆ ತೆರಳಿತ್ತು. ಈ ಪೈಕಿ ಮೂವರು ಸಮುದ್ರ ತೀರದಲ್ಲಿ ಕುಳಿತುಕೊಂಡಿದ್ದರೆ, ಉಳಿದ ನಾಲ್ವರು ಸಮೀಪದ ಬಂಡೆಯ ಮೇಲೆ ನಿಂತು ಸಮುದ್ರದ ಸೌಂದರ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಯೊಂದು ಬಂಡೆಯ ಮೇಲಿದ್ದ ಇಬ್ಬರನ್ನು ಸಮುದ್ರಕ್ಕೆ ಎಳೆದುಕೊಂಡು ಹೋಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸೌದ್ ಗವಾಹಿ ಅವರು ಸಿಹಾನ್ ಹಾಗೂ ಸಾಜಪ್ ಎಂಬವರ ಜೊತೆಗೂಡಿ ಪ್ರಾಣದ ಹಂಗು ತೊರೆದು ಸಮುದ್ರಕ್ಕಿಳಿದು ರಕ್ಷಣೆಗೆ ಮುಂದಾದರು. ಆದರೆ, ದುರಾದೃಷ್ಟವಶಾತ್ ಅಷ್ಟರಲ್ಲಾಗಲೇ ಇಬ್ಬರೂ ಯುವಕರು ಮೃತಪಟ್ಟಿದ್ದರು. ನಂತರ ಅವರ ಮೃತದೇಹಗಳನ್ನು ಸಮುದ್ರದಿಂದ ಹೊರತೆಗೆಯಲಾಯಿತು.
ವಿಷಯ ತಿಳಿದ ಭಟ್ಕಳ ಡಿವೈಎಸ್ಪಿ ಗಿರೀಶ್, ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಕರಾವಳಿ ಭದ್ರತಾ ಪಡೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.