ಚಿಕ್ಕಬಳ್ಳಾಪುರ: ಬೆಚ್ಚಿಬೀಳಿಸಿದ ಘಟನೆ: 3 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಪೋಕ್ಸೋ ಪ್ರಕರಣ ದಾಖಲು...

ಚಿಕ್ಕಬಳ್ಳಾಪುರ: ಬೆಚ್ಚಿಬೀಳಿಸಿದ ಘಟನೆ: 3 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಪೋಕ್ಸೋ ಪ್ರಕರಣ ದಾಖಲು...

ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಮೂರು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ತೀವ್ರ ಆತಂಕಕ್ಕೆ ಕಾರಣವಾಗಿದೆ. ಚಿಂತಾಮಣಿ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಗೆ ಸಂಬಂಧಿಸಿದ ಈ ಘಟನೆ ಇದೀಗ ಪೊಲೀಸ್ ತನಿಖೆಯ ಕೇಂದ್ರಬಿಂದುವಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಚಂದ್ರು ಎಂಬ ವ್ಯಕ್ತಿ ಕಳೆದ ಒಂದು ವರ್ಷದಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ರಜೆ ದಿನಗಳಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಮೂರು ತಿಂಗಳಿಂದ ಋತುಚಕ್ರವಾಗದ ಹಿನ್ನೆಲೆಯಲ್ಲಿ ಪೋಷಕರು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಅಗತ್ಯ ರಕ್ಷಣೆ ಮತ್ತು ಆರೈಕೆ ಒದಗಿಸಲಾಗಿದೆ.

ಈ ನಡುವೆ, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆದಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಶಾಲಾ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.


Ads on article

Advertise in articles 1

advertising articles 2

Advertise under the article