ಬೆಂಗಳೂರು :ಗೃಹ ಲಕ್ಷ್ಮಿ - ಮನೆ ಮನೆಗೆ ತೆರಳಿ ಮರು ಪರಿಶೀಲನಾ ಸರ್ವೆ; ಯಜಮಾನಿಗಳಿಂದ ಸ್ವಯಂ ಘೋಷಣೆ ಪತ್ರ ಪಡೆಯಲಿರುವ ಸರ್ಕಾರ! grahalakshmi scheme house survey
ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಸರ್ವೆ ನಡೆಸಲು ತೀರ್ಮಾನಿಸಿರುವ ಸರ್ಕಾರ ಮರು ಪರಿಶೀಲನಾ ಅರ್ಜಿ ಮೂಲಕ ಮಾಹಿತಿ ಸಂಗ್ರಹಿಸಿ, ಫಲಾನಿಭವಿಗಳ ಸಹಿಯೊಂದಿಗೆ ಸ್ವಯಂ ಘೋಷಣೆ ಹೇಳಿಕೆ ಪತ್ರ ಪಡೆಯಲಿದೆ.
ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಯ ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀರ್ಮಾನಿಸಿದ್ದಾರೆ. ಪಂಚ ಗ್ಯಾರಂಟಿ ಯೋಜನೆ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿದೆ. ಅದರಲ್ಲೂ ಗೃಹ ಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆ ಪರಿಷ್ಕರಣೆಗೆ ಮುಂದಾಗಿದ್ದಾರೆ.
ಅನರ್ಹ ಫಲಾನುಭವಿಗಳಿಗೆ ಕಡಿಣವಾಣ ಹಾಕಲು ಮನೆ ಮನೆ ಸರ್ವೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಪರಿಶೀಲನಾ ಸಭೆಯಲ್ಲಿ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಸರ್ವೆ ಮಾಡಲು ತೀರ್ಮಾನಿಸಲಾಗಿದೆ.
ಮರು ಪರಿಶೀಲನಾ ಅರ್ಜಿ ಮೂಲಕ ಮಾಹಿತಿ ಸಂಗ್ರಹ: ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಮೂಲಕ ಮಾಹಿತಿ ಸಂಗ್ರಹಿಸಲು ಗೃಹ ಲಕ್ಷ್ಮಿ ಯೋಜನೆ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಮನೆ ಮನೆಗೆ ತೆರಳಿ ಸರ್ವೆ ಮಾಡಲು ತೀರ್ಮಾನಿಸಿದೆ. ಆ ಮೂಲಕ ಅನರ್ಹ ಫಲಾನುಭವಿಗಳು ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳ ದುರುಪಯೋಗ ಮಾಡುವುದಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿದೆ. ಈ ಸಂಬಂಧ ಮರುಪರಿಶೀಲನಾ ಅರ್ಜಿಯಲ್ಲಿ 10 ಅಂಶಗಳ ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದೆ.
ಗೃಹ ಲಕ್ಷ್ಮಿ ಮರು ಪರಿಶೀಲನಾ ಅರ್ಜಿಯಲ್ಲಿ ಯಜಮಾನಿಯ ಪಡಿತರ ಚೀಟಿ ಸಂಖ್ಯೆಯನ್ನು ಪಡೆಯಲಾಗುವುದು. ಮಂಜೂರಾತಿ ಪತ್ರ ಸಂಖ್ಯೆ, ಮನೆಯ ಯಜಮಾನಿಯ ಹೆಸರು ಮತ್ತು ವಿಳಾಸ ಪಡೆಯಲಾಗುವುದು. ಮನೆಯ ಯಜಮಾನಿಯ ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಯಜಮಾನಿಯಿಂದ ಪಡೆಯಲಾಗುವುದು.
ಹಣ ಪಾವತಿ ಮಾಡಬೇಕಾದ ಮನೆಯ ಯಜಮಾನಿಯ ವೈಯಕ್ತಿಕ ಬ್ಯಾಂಕ್/ಅಂಚೆ ಕಚೇರಿ ಖಾತೆ ವಿವರಗಳನ್ನು ನೀಡಬೇಕು. ಜೊತೆಗೆ ಕರ್ನಾಟಕ ವ್ಯಾಪ್ತಿಯೊಳಗೆ ಇರುವ ಬ್ಯಾಂಕ್/ಅಂಚೆ ಕಚೇರಿ ಶಾಖೆಯಲ್ಲಿನ ಆಧಾರ್ ಜೋಡಣೆಯಾಗಿರುವ ಖಾತೆಯ ಮಾಹಿತಿ ನೀಡಬೇಕಾಗಿದೆ.
ಎರಡ್ಮೂರು ದಿನಗಳಲ್ಲಿ ಸರ್ವೆ ಕಾರ್ಯ ಶುರು: ಇದರ ಜೊತೆಗೆ ಪತಿಯ ಹೆಸರು, ಪತಿಯ ಆಧಾರ್ ಸಂಖ್ಯೆಯನ್ನು ಅರ್ಜಿ ಮೂಲಕ ಪಡೆಯಲಾಗುವುದು. ಫಲಾನುಭವಿಗಳು ಎಸ್ ಸಿ, ಎಸ್ ಟಿ, ಒಬಿಸಿ, ಇತರೆ ವರ್ಗಕ್ಕೆ ಸೇರಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲಾಗುವುದು. ಸಂಪರ್ಕಿಸಲು ಮೊಬೈಲ್ ನಂಬರನ್ನು ಪಡೆಯಲಾಗುವುದು. ಇನ್ನು ಎರಡು ಮೂರು ದಿನಗಳಲ್ಲಿ ಈ ಸರ್ವೆ ಕಾರ್ಯ ಆರಂಭಿಸಲು ಚಿಂತನೆ ನಡೆಸಲಾಗಿದೆ.
ಯಜಮಾನಿಯಿಂದ ಸಹಿಯೊಂದಿಗೆ ಸ್ವಯಂ ಘೋಷಣೆ ಹೇಳಿಕೆ ಪತ್ರ: ಇದೇ ಮರು ಪರಿಶೀಲನಾ ಅರ್ಜಿ ವೇಳೆ ಫಲಾನುಭವಿಗಳು/ಯಜಮಾನಿಯಿಂದ ಸ್ವಯಂ ಘೋಷಣೆ ಪತ್ರವನ್ನು ಪಡೆಯಲಾಗುತ್ತದೆ. ಸ್ವಯಂ ಘೋಷಣೆಯಲ್ಲಿ ಯಜಮಾನಿ, ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರೇ ಅನ್ನೋದರ ಬಗ್ಗೆ ಮಾಹಿತಿ ನೀಡಬೇಕು. ಜಿಎಸ್ಟಿ ಪಾವತಿದಾರರೇ ಅನ್ನೋದನ್ನು ತಿಳಿಸಬೇಕು. ಸರ್ಕಾರಿ ನೌಕರರಾಗಿರುವುದಿಲ್ಲ ಅನ್ನೋದನ್ನೂ ಘೋಷಣೆ ಮಾಡಬೇಕು.
ಸ್ವಯಂ ಘೋಷಣೆಯಲ್ಲಿ ಅರ್ಜಿದಾರರು ನನ್ನ ಕುಟುಂಬ, ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಎಲ್ಲಾ ವಿವರ ನನ್ನ ತಿಳುವಳಿಕೆಯಂತೆ ಸಮರ್ಪಕವಾಗಿದೆ. ನಾನು ಒದಗಿಸಿರುವ ಮಾಹಿತಿ ಸುಳ್ಳು ಅಂತ ಕಂಡುಬಂದರೆ ಕಾನೂನು ಕ್ರಮಕ್ಕೆ ಒಳಗಾಗಲು ಹಾಗೂ ಗೃಹಲಕ್ಷ್ಮೀ ಯೋಜನೆ ಸೌಲಭ್ಯಗಳನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆ ಅನ್ನೋದನ್ನು ಘೋಷಿಸಬೇಕಾಗಿದೆ.
ಜಿಎಸ್ ಟಿ, ಐಟಿ ಪಾವತಿಸುವ, ಮೃತ ಫಲಾನುಭವಿಗಳ ವಿವರ: ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಸುಮಾರು 1.30 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೆ ಸುಮಾರುವ 72,251 ಕೋಟಿ ರೂಪಾಯಿಗಳನ್ನು ಯಜಮಾನಿಯರ ಖಾತೆಗೆ ಡಿಬಿಟಿ ಮಾಡಲಾಗಿದೆ. ಒಟ್ಟು ಫಲಾನುಭವಿಗಳ ಪೈಕಿ ಮಾರ್ಚ್ ವರೆಗೆ ಒಟ್ಟು 1,94,560 ಫಲಾನುಭವಿಗಳು ಐಟಿ ಹಾಗೂ ಜಿಎಸ್ ಟಿ ಪಾವತಿ ಮಾಡುವವರಾಗಿದ್ದಾರೆ ಎಂದು ಗುರುತಿಸಲಾಗಿದೆ. ಅದೇ ರೀತಿ ಮೃತರ ಸಂಖ್ಯೆ 2,88,376 ಎಂದು ಗುರುತಿಸಲಾಗಿದೆ. ಮೇ ವೇಳೆಗೆ 1,03,922 ಯಜಮಾನಿಗಳು ಮರು ಅರ್ಜಿ ಸಲ್ಲಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಸಕಾಲದಲ್ಲಿ ದೊರೆಯದಿರುವ ಬಗ್ಗೆ ತಾಂತ್ರಿಕ ಸಮಸ್ಯೆ ಬರುತ್ತಿದೆ. ಜೊತೆಗೆ ಇ-ಕೆವೈಸಿ ಹಾಗೂ ಬ್ಯಾಂಕ್ ಖಾತೆ/ಎನ್ ಪಿಸಿಐ ನಿಷ್ಕ್ರಿಯವಾಗಿರುವ ಫಲಾನುಭವಿಗಳ ಖಾತೆಗಳ ಸಮಸ್ಯೆ ಎದುರಾಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಗಮನ ಸೆಳೆದಿದ್ದಾರೆ.
ಮನೆ ಮನೆಗೆ ಹೋಗಿ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿಯ ಫಲಾನುಭವಿಗಳ ಸರ್ವೆ ಮಾಡಲಾಗುವುದು. ಇದರಲ್ಲಿ ಫಲಾನುಭವಿಗಳ ಮಾಹಿತಿಯನ್ನು ಪಡೆಯಲಾಗುವುದು. ಇದು ಫಲಾನುಭವಿಗಳ ಕೆವೈಸಿ ಮಾಡಿದ ಹಾಗೆ. ಯಜಮಾನಿಯ ವಿಳಾಸ, ಆಧಾರ್ ಸಂಖ್ಯೆ ಸೇರಿ ಎಲ್ಲ ಮಾಹಿತಿಯನ್ನು ಪಡೆಯಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ತಿಳಿಸಿದ್ದಾರೆ.