ಮುಂಬೈ : ಪುಣೆಯಲ್ಲಿ ಭಕ್ತಿ ಹೆಸರಿನಲ್ಲಿ ಭಯಾನಕ ಶೋಷಣೆ!”: ಮಹಿಳೆ ಮೇಲೆ ವರ್ಷಗಳ ಲೈಂಗಿಕ ಶೋಷಣೆ; ಮೂತ್ರ ಕುಡಿಯುವಂತೆ ಬಲವಂತ, ಸ್ವಘೋಷಿತ ‘ದೇವಮಾನವ’ ಸೇರಿ 8 ಮಂದಿ ಬಂಧನ..!!

ಪುಣೆ: ಸ್ವಘೋಷಿತ ‘ದೇವಮಾನವ’ನೊಬ್ಬ ಮಹಿಳೆಯನ್ನು ಹಲವು ವರ್ಷಗಳ ಕಾಲ ಲೈಂಗಿಕವಾಗಿ ಶೋಷಿಸಿ, ಅಮಾನವೀಯ ಕಿರುಕುಳ ನೀಡಿದ ಆರೋಪದ ಮೇಲೆ ಆತನೊಂದಿಗೆ ಏಳು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ಎಂದು ಗುರುತಿಸಲಾಗಿದೆ.
ಪುಣೆಯ ವಾಘೋಲಿ ಪ್ರದೇಶದಲ್ಲಿ ‘ಆಧುನಿಕ ಗುರುಕುಲ’ ಎಂಬ ಆಶ್ರಮ ನಡೆಸುತ್ತಿದ್ದ ಮಿಶ್ರಾ, ತನ್ನನ್ನು ದೇವರ ಅವತಾರ ಎಂದು ಬಿಂಬಿಸಿಕೊಂಡು ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, 2010ರಲ್ಲಿ ಮಿಶ್ರಾ ಸಂಪರ್ಕಕ್ಕೆ ಬಂದಿದ್ದ ಮಹಿಳೆಯನ್ನು ಆತ ಕುಟುಂಬದಿಂದ ದೂರ ಮಾಡಿ, ಪತಿಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರಿದ್ದ. 2010ರಿಂದ 2016ರ ಅವಧಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ದೈಹಿಕ ಹಲ್ಲೆ, ವಿದ್ಯುತ್ ಶಾಕ್ ನೀಡುವುದು ಹಾಗೂ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿರುವ ಆರೋಪ ಕೇಳಿಬಂದಿದೆ.
ಆ ವಿಡಿಯೊಗಳನ್ನು ಬಳಸಿಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಿಶ್ರಾ, ತನ್ನ ಬಳಿ ಅಲೌಕಿಕ ಶಕ್ತಿಗಳಿವೆ ಎಂದು ನಂಬಿಸಿ ಬೆದರಿಕೆ ಹಾಕುತ್ತಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ, ಮಹಿಳೆಯನ್ನು ತನ್ನ ಮೂತ್ರ ಕುಡಿಯುವಂತೆ ಬಲವಂತಪಡಿಸಿದ್ದಲ್ಲದೆ, ಆಶ್ರಮದ ಹಾಗೂ ತನ್ನ ವೈಯಕ್ತಿಕ ಆಸ್ತಿಯನ್ನು ಹೆಚ್ಚಿಸಿಕೊಳ್ಳಲು ಕಳ್ಳತನ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ವೇಳೆ ಆಶ್ರಮದ ಮೇಲೆ ದಾಳಿ ನಡೆಸಿದ ಪೊಲೀಸರು, ಭೂಗತ ಕೊಠಡಿಯೊಂದರಿಂದ 12 ಲ್ಯಾಪ್‌ಟಾಪ್‌ಗಳು, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡ್ರೈವ್‌ಗಳು, ಪೆನ್ ಡ್ರೈವ್‌ಗಳು, ಕ್ಯಾಸೆಟ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಲ್ಲದೆ, ಸುಮಾರು ₹15 ಲಕ್ಷ ಮೌಲ್ಯದ ನಗದು, ಆಭರಣಗಳು, ಔಷಧೀಯ ಮಾತ್ರೆಗಳು ಹಾಗೂ ವಿವಿಧ ಔಷಧಿಗಳ ಸಂಗ್ರಹವೂ ಪತ್ತೆಯಾಗಿದೆ. ವಶಪಡಿಸಿಕೊಂಡ ಸಾಧನಗಳ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ.
ಮಿಶ್ರಾ ಮತ್ತು ಆತನ ಆಪ್ತ ಸಹಾಯಕ ಕನ್ವಾಲ್ ನಯನ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದಲ್ಲಿ ಇನ್ನಷ್ಟು ಸಂತ್ರಸ್ತರು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.