ಹುಬ್ಬಳ್ಳಿ: ಪತ್ನಿಯಿಂದ ಕಿರುಕುಳ ಆರೋಪ, ಆಟೋ ಚಾಲಕ ಆತ್ಮಹತ್ಯೆ...
ಹುಬ್ಬಳ್ಳಿ: ಪತ್ನಿ ಮತ್ತು ಪೊಲೀಸರ ಕಿರುಕುಳದಿಂದ ಬೇಸತ್ತ ಆಟೋ ಚಾಲಕನೋರ್ವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗೇರಿಯ ಕೆಂಚಪ್ಪನ ತೋಟದ ಬಳಿಯ ಹರಿಜನ ಕಾಲೋನಿಯಲ್ಲಿ ನಡೆದಿದೆ.
ಸಂತೋಷ್ ಹಳ್ಳೂರ (45) ಎಂಬಾತ ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ. ಸಂತೋಷನ ಸಾವಿಗೆ ಆತನ ಪತ್ನಿ ಹಾಗೂ ಮಹಿಳಾ ಠಾಣೆಯ ಪೊಲೀಸರ ಕಿರುಕುಳ ಎಂದು ಕುಟುಂಬಸ್ಥರು ಆರೋಪಿಸಿ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ಸಂತೋಷ್ ಹಾಗೂ ಲಲಿತಾ ಸುಮಾರು 18 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಗಂಡುಮಕ್ಕಳು ಹಾಗೂ ಓರ್ವ ಮಗಳಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಅಶೋಕ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪತ್ನಿ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆಯಿಸಿ ಕಿರುಕುಳ ನೀಡಿದ್ದರಿಂದ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಂಬಂಧಿಗಳು ಆರೋಪಿಸುತ್ತಿದ್ದಾರೆ.
ಪತ್ನಿಗೆ ಪತಿ ಸಂತೋಷ ಇತ್ತೀಚಿಗೆ ಅಂಗನವಾಡಿಯಲ್ಲಿ ಶಿಕ್ಷಕಿ ಕೆಲಸ ಕೊಡಿಸಿದ್ದ. ಅಂಗನವಾಡಿ ಹುದ್ದೆ ಖಾಯಂ ಆದ ನಂತರ ಪತ್ನಿ ಊರೂರು ಸುತ್ತುತ್ತಿದ್ದಾಳೆ ಎಂದು ಅನುಮಾನಗೊಂಡಿದ್ದ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಈ ಜಗಳ ವಿಕೋಪಕ್ಕೆ ಹೋಗಿ ಪೊಲೀಸರಿಗೆ ದೂರು ನೀಡೋ ಜೊತೆಗೆ ವಿಚ್ಛೇದನಕ್ಕೆ ಲಲಿತಾ ಅರ್ಜಿ ಹಾಕಿದ್ದಳು. ಪತಿ ಜೊತೆ ಸಂಸಾರ ಮಾಡಲ್ಲ ಅಂತ ಪಟ್ಟು ಹಿಡಿದಿದ್ದಳು. ಇದೆಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಂತೋಷ್ ಸಾವಿಗೆ ಶರಣಾಗಿದ್ದಾನೆ. ಹೀಗಾಗಿ ಪತ್ನಿ ಮತ್ತು ಪೊಲೀಸರ ವಿರುದ್ಧ ಕ್ರಮಕ್ಕೆ ಸಂಬಂಧಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಮೃತನ ಸಹೋದರಿ ಸವಿತಾ ಮಾತನಾಡಿ, ''18 ವರ್ಷಗಳ ಹಿಂದೆ ಮದುವೆಯಾಗಿದೆ. ಆಗಿನಿಂದಲೂ ಸಣ್ಣಪುಟ್ಟ ಜಗಳ ಮಾಡಿಕೊಂಡು ಇದ್ದರು. ಮದ್ಯಪಾನ ಮಾಡಿ ಪತಿ ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ಹಾಗೂ ಮಕ್ಕಳು ಆರೋಪಿಸುತ್ತಿದ್ದರು. ಆದ್ರೆ ಕೆಲ ದಿನಗಳಿಂದ ಇವರೇ ಸೇರಿಕೊಂಡು ಆತನಿಗೆ ಹೊಡೆದಿದ್ದಾರೆ. ಅಲ್ಲದೇ ಮಹಿಳಾ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಕೂಡ ಮನಬಂದಂತೆ ಥಳಿಸಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ನನ್ನ ಸಾವಿಗೆ ಪತ್ನಿ ಹಾಗೂ ಮಕ್ಕಳು ಕಾರಣ ಎಂದು ಡೆತ್ ನೋಟ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು'' ಎಂದು ಒತ್ತಾಯಿಸಿದ್ದಾರೆ.