ಆಂಧ್ರ ಪ್ರದೇಶ :ಕೃಷ್ಣಾ ನದಿಯಲ್ಲಿ ದೋಣಿ ದುರಂತ: ಮೂವರು ಮಕ್ಕಳು ಸೇರಿ ನಾಲ್ವರು ಸಾವು..
ಆಂಧ್ರ ಪ್ರದೇಶ: ಕೃಷ್ಣಾ ನದಿಯಲ್ಲಿ 10 ಜನರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ಭಾರಿ ದುರಂತ ಸಂಭವಿಸಿದೆ. ಈ ವೇಳೆ ಮೂವರು ಮಕ್ಕಳು ಸೇರಿದಂತೆ ನಾಲ್ವರು ನೀರುಪಾಲಾಗಿರುವ ದುರ್ಘಟನೆ ಪಲ್ನಾಡು ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಗಂಧಾಮ್ ಸಂಧ್ಯಾ(9), ಗಂಧಾಮ್ ಸೈನಿ(10), ಭತುಲಾ ಕಾರ್ತಿಕ್ (12) ಮತ್ತು 28 ವರ್ಷ ವಯಸ್ಸಿನ ಕೊನತಾ ಚೈತನ್ಯಾ ಎಂದು ಗುರುತಿಸಲಾಗಿದೆ. ಇವರೆಲ್ಲರ ಮೃತದೇಹಗಳನ್ನು ಶೋಧ ಕಾರ್ಯಾಚರಣೆ ಮೂಲಕ ನದಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಕೋನೂರ ಗ್ರಾಮದಲ್ಲಿ ನಡೆದ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಕೆಲವರು ನದಿಯಲ್ಲಿ ಬೋಟಿಂಗ್ ತೆರಳಿದ್ದರು. ನದಿಯ ಮಧ್ಯೆದಲ್ಲಿ ದೋಣಿಯು ನಿಯಂತ್ರಣ ಕಳೆದುಕೊಂಡ ಪರಿಣಾಮ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ತಕ್ಷಣ ಧಾವಿಸಿ ಆರು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಅವರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಪೊಲೀಸರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಮೀನುಗಾರರು ಜಂಟಿಯಾಗಿ ದೋಣಿ ಪಲ್ಟಿಯಾಗಿ ನೀರಿಗೆ ಬಿದ್ದವರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದರು. ನಾಪತ್ತೆಯಾಗಿದ್ದ ನಾಲ್ವರಿಗೆ ಹುಡುಕಾಟದಲ್ಲಿ ತೊಡಗಿಸಿಕೊಂಡರು. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ದೋಣಿ ಮುಳುಗಿದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿರುವ ಜಗನ್ ಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಕ್ಷಣ ನೆರವು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.