ದಾವಣಗೆರೆ :ಹಸಿರು ಹೊದಿಕೆ ಹೊತ್ತು ನಿಂತ 'ಶಾಂತಿರತ್ನ' ನಿವಾಸ: ಮನೆಯ ಎಲ್ಲೆಡೆ ಸಸಿಗಳ ಕಲರವ; ಇದು ಪ್ರೊ.ಶಿಶುಪಾಲರ ಹಸಿರು ಸ್ವರ್ಗ
ದಾವಣಗೆರೆ: ತಮ್ಮ ಮನೆ ಸುಂದರವಾಗಿ ಕಾಣಬೇಕೆಂದು ಮನೆ ಮುಂದೆ ಬೆಳೆದು ನಿಂತ ಮರಗಳನ್ನು ಕಡಿದು ಹಾಕುವ ದಿನಗಳಿವು. ಇಂತಹ ದಿನಗಳಲ್ಲಿ ದಾವಣಗೆರೆಯ ಅಪ್ಪಟ ಪರಿಸರ ಪ್ರೇಮಿಯೊಬ್ಬರು ಮನೆಯನ್ನೇ ಪುಟ್ಟ ಕಾನನವನ್ನಾಗಿಸಿದ್ದಾರೆ. ಅವರ ಮನೆಯ ಒಳಭಾಗ, ಹೊರಭಾಗ ಎಲ್ಲಿ ನೋಡಿದರಲ್ಲಿ ಹಸಿರು ಹೊದಿಕೆ ಹೊತ್ತು ನಿಂತ ಗಿಡಮರಗಳೇ ಕಾಣ ಸಿಗುತ್ತವೆ.
ಕಾಂಕ್ರೀಟ್ ಕಾಡಿನ ನಡುವೆ ಇದೊಂದು ಅಪರೂಪದ ಹಸಿರು ತುಂಬಿದ ಮನೆ. ಹೆಸರು 'ಶಾಂತಿರತ್ನ'. ಪ್ರೊಫೆಸರ್‌ವೊಬ್ಬರ ನಿವಾಸ. ಮನೆ ತುಂಬಾ ಬಣ್ಣಬಣ್ಣದ ಹೂವುಗಳದ್ದೇ ಪರಿಮಳ ಮತ್ತು ನೂರಾರು ಸಸ್ಯಗಳ ನಗು ಮುಖದ ಸ್ವಾಗತ ಮನಸ್ಸನ್ನು ಪುಟ್ಟ ಕಾನನದೆಡೆ ಕರೆದೊಯ್ಯುತ್ತದೆ. ದಾವಣಗೆರೆ ನಗರದ ಎಸ್ಎಸ್ ಬಡಾವಣೆಯ ನಿವಾಸಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಹವ್ಯಾಸಿ ಪಕ್ಷಿವೀಕ್ಷಕ ಪ್ರೊ.ಎಸ್.ಶಿಶುಪಾಲ ಅವರ 'ಶಾಂತಿರತ್ನ' ನಿವಾಸದ ವಿಶೇಷತೆ ಇದು.

850ಕ್ಕೂ ಹೆಚ್ಚು ಗಿಡ, ಮರ, ಬಳ್ಳಿಗಳು: ದಾವಣಗೆರೆ ನಗರದ ಎಸ್.ಎಸ್.ಬಡಾವಣೆಯ 'ಎ' ಬ್ಲಾಕ್‌ನಲ್ಲಿರುವ ಪ್ರೊ.ಎಸ್.ಶಿಶುಪಾಲರ ನಿವಾಸ ಇಡೀ ಜಿಲ್ಲೆಗೆ ಮಾದರಿ ಪರಿಸರ ಪ್ರೇಮಿಯ ಮನೆಯಾಗಿದೆ. ಮನೆಯ ಒಳಾಂಗಣ ಮತ್ತು ಹೊರಾಂಗಣ ಸೇರಿ 850ಕ್ಕೂ ಹೆಚ್ಚು ಗಿಡ, ಮರ ಹಾಗೂ ಬಳ್ಳಿಗಳನ್ನು ಅವರು ಶ್ರಮಪಟ್ಟು ಬೆಳೆಸಿದ್ದಾರೆ. ಅಪ್ಪಟ ಪರಿಸರಪ್ರೇಮಿಯಾಗಿರುವ ಶಿಶುಪಾಲ ಹಾಗೂ ಪದ್ಮಲತಾ ದಂಪತಿ ಉತ್ತರ ಕನ್ನಡ ಜಿಲ್ಲೆಯ ಕಾನನದ ಪುಟ್ಟ ಹಳ್ಳಿಯಲ್ಲಿ ಬೆಳೆದಿದ್ದರಿಂದ ಈ ರೀತಿಯ ಹಸಿರಿನ ವಾತಾವರಣವನ್ನು ಮನೆಯಲ್ಲೇ ನಿರ್ಮಿಸಿಕೊಂಡಿದ್ದಾರೆ. ಶಾಂತಿರತ್ನ ನಿವಾಸದ ಡೈನಿಂಗ್ ರೂಮ್, ಹಾಲ್ ಸೇರಿದಂತೆ ಮಲಗುವ ಕೋಣೆ, ದೇವರ ಕೋಣೆ, ಅಡುಗೆಮನೆ, ಶೌಚಾಲಯ ಹೀಗೆ ಮನೆಯ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಹಸಿರು ಕಂಗೊಳಿಸುತ್ತಿದೆ. ಈ ಮನೆಯಲ್ಲಿ ಹಸಿರು ಜೀವಂತಿಕೆಯಿಂದ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ
ಮನೆಯ ಟೆರೆಸ್, ಬಾಲ್ಕನಿಯಲ್ಲೂ ಪುಟ್ಟ ಶಾಂತಿಯ ವನ: ಮನೆಯ ಒಳಾಂಗಣ ಹಾಗೂ ಹೊರಾಂಗಣ ಅಲ್ಲದೇ ಟೆರೆಸ್, ಬಾಲ್ಕನಿಯೂ ಹಸಿರಿನಿಂದ ತುಂಬಿದೆ. ಈ ಬಾಲ್ಕನಿಗೆ ಕಾಲಿಟ್ಟರೆ ಅದು ಪುಟ್ಟ ನರ್ಸರಿಯಂತೆ ಕಾಣುತ್ತದೆ. ಸ್ವಲ್ಪ ಮುಂದೆ ಹೋದರೆ ತೂಗು ಕುಂಡಗಳಲ್ಲಿ ವಿಶೇಷ ಸಸ್ಯಗಳನ್ನು ಶಿಶುಪಾಲರು ಬೆಳೆಸಿದ್ದಾರೆ. ಮೆಟ್ಟಿಲುಗಳ ಪಕ್ಕದಲ್ಲಿ ಸಾಲಾಗಿ ನಿಂತಿರುವ ಹೂವಿನ ಗಿಡಗಳು ಮತ್ತು ಎಲ್ಲೆಡೆ ಹರಡಿರುವ ಹಸಿರು ವಾತಾವರಣ ಮನೆಗೆ ವಿಶಿಷ್ಟ ಸೌಂದರ್ಯ ನೀಡಿವೆ. ಅಲ್ಲದೆ ಇಲ್ಲಿ ವಿವಿಧ ರೀತಿಯ ಹೂವುಗಳ ಸಸ್ಯಗಳನ್ನು ಕಾಣಬಹುದಾಗಿದೆ. ಮನೆಯ ಟೆರೆಸ್ ಮೇಲೆ ಮಲ್ಲಿಗೆ, ಲಿಲ್ಲಿ, ದಾಸವಾಳ, ಸಂಪಿಗೆ, ಗುಲಾಬಿ, ಪಾರಿಜಾತ, ಬಟನ್ ರೋಸ್, ಇನ್ನಿತರ ಹೂವುಗಳು ಕೈಬೀಸಿ ಕರೆಯುತ್ತಿವೆ. 110ಕ್ಕೂ ಹೆಚ್ಚು ಹೂವಿನ ಸಸ್ಯಗಳು ಇಲ್ಲಿ ಅರಳಿ ನಿಂತಿವೆ. ಕಮಲ, ನೈದಿಲೆ, ಗ್ರೀನ್ ರೋಸ್ ಸೇರಿದಂತೆ ಜಲಸಸ್ಯಗಳು ಕೂಡ ವಿಶೇಷ ಆಕರ್ಷಣೆಯಾಗಿವೆ.

ಸುತ್ತುವರಿದ ಸಸ್ಯರಾಶಿ, ವಿವಿಧ ಪ್ರಭೇದದ ಪಕ್ಷಿಗಳ ಭೇಟಿ: ವಿವಿಧ ಸಸ್ಯರಾಶಿ ಇಡೀ ಮನೆಯನ್ನು ಸುತ್ತುವರಿದಿದ್ದು, ಎಲ್ಲಿ ನೋಡಿದರೂ ಹಸಿರು ಭಾಸವಾಗುತ್ತದೆ. ಮನೆಯ ಮುಂದಿರುವ ಪುಟ್ಟ ತೋಟಕ್ಕೆ ವಿವಿಧ ಪ್ರಭೇದದ ಪಕ್ಷಿಗಳು ಪ್ರತಿನಿತ್ಯ ಭೇಟಿ ನೀಡುತ್ತದೆ. ಬುಲ್ ಬುಲ್ ಹಕ್ಕಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಇನ್ನು ಇಲ್ಲಿ ಪನ್ನೇರಳೆ, ಬಾಳೆ, ನಿಂಬೆ, ಸೀತಾಫಲ, ಪಪ್ಪಾಯಿ ಸೇರಿದಂತೆ ಹಲವಾರು ಫಲವೃಕ್ಷಗಳು ಪಕ್ಷಿಗಳಿಗೆ ಆಹಾರವಾಗುತ್ತಿವೆ. ಶುಂಠಿ, ತುಳಸಿ, ಕರಿಬೇವು, ಆಲೋವೆರಾ, ಪುದೀನಾ, ಅರಿಶಿನ ಸೇರಿದಂತೆ ಅನೇಕ ಔಷಧೀಯ ಸಸ್ಯಗಳು ಮನೆಗೆ ಲಗ್ಗೆ ಇಟ್ಟಿವೆ. ಟೊಮೆಟೊ, ಬದನೆಕಾಯಿ ಸೇರಿದಂತೆ ತರಕಾರಿ ಗಿಡಗಳೂ ಸಹ ಕುಟುಂಬದ ಅಗತ್ಯಗಳನ್ನು ಬೆಳೆಯಲಾಗಿದೆ.
ಪ್ರೊ.ಎಸ್.ಶಿಶುಪಾಲ ಹಾಗೂ ಪದ್ಮಲತಾ ದಂಪತಿ ಇಬ್ಬರು ಈ ಪುಟ್ಟ ಕೈ ತೋಟ ಬೆಳೆಸುತ್ತಿದ್ದಾರೆ. ಪದ್ಮಲತಾ ಅವರು ಬೆಳಗ್ಗೆ ಕೆಳಗೆ ಮನೆ ಆವರಣದಲ್ಲಿ ಇರುವ ಗಿಡ ಮರಗಳಿಗೆ ನೀರುಣಿಸಿದರೆ, ಸಂಜೆ ಟೆರೆಸ್ ತೋಟಕ್ಕೆ, ಕುಂಡಗಳಿಗೆ ನೀರು ಹಾಯಿಸುತ್ತಾರೆ. ಪ್ರತಿದಿನ ಒಂದೆರಡು ಗಂಟೆ ಈ ಮನೆ ಪರಿಸರಕ್ಕೆ ಸೀಮಿತವಾಗಿಡಲಾಗಿದೆ. ಭಾನುವಾರ ಬಂದರೆ ಇಡೀ ಪುಟ್ಟ ತೋಟದ ಪೋಷಣೆ ಮಾಡುವುದು ಇವರ ಕಾಯಕ.

ಪರಿಸರದ ಬಗ್ಗೆ ಅರಿವು ಮೂಡಿಸುವ ಕೇಂದ್ರವಾಗಿಯೂ ಈ ಮನೆ ಗುರುತಿಸಿಕೊಂಡಿದೆ. ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಇಲ್ಲಿ ಭೇಟಿ ನೀಡಿ ಪರಿಸರ ಸಂರಕ್ಷಣೆ, ಮನೆ ತೋಟ ನಿರ್ಮಾಣ ಹಾಗೂ ಸಸ್ಯಪೋಷಣೆ ಬಗ್ಗೆ ತಿಳಿದುಕೊಳ್ಳುತ್ತಾರೆ. ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸುವ ಕಾರ್ಯವನ್ನು ಶಿಶುಪಾಲ ದಂಪತಿ ನಿರಂತರವಾಗಿ ಮಾಡುತ್ತಿದ್ದಾರೆ.
ಪ್ರೊ.ಎಸ್.ಶಿಶುಪಾಲ ಅವರಿಗೆ ಹಲವು ಪ್ರಶಸ್ತಿಗಳು ಹುಡುಕಿ ಬಂದಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯ 'ಪರಿಸರಸ್ನೇಹಿ ಮನೆ' ಪ್ರಶಸ್ತಿ, ತೋಟಗಾರಿಕೆ ಇಲಾಖೆಯ ಅತ್ಯುತ್ತಮ ಮನೆ ತೋಟ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಗೌರವಿಸಿವೆ.