ಶಿವಮೊಗ್ಗ: ಕಡಜದ ಹುಳು ಕಡಿದು 8 ವರ್ಷದ ಮಗ ಸಾವು, ತಂದೆ ಆಸ್ಪತ್ರೆಗೆ ದಾಖಲುwasp biting boy death
ಶಿವಮೊಗ್ಗ: ಕಡಜದ(ಕಣಜ) ಹುಳುಗಳು ಕಚ್ಚಿ 8 ವರ್ಷದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಸಾಗರ ತಾಲೂಕು ಹತ್ತಿಸರ ಗ್ರಾಮದಲ್ಲಿ ನಡೆದಿದೆ. ಹತ್ತಿಸರ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ನಿಷ್ಮಿತ್ ಮೃತ ಬಾಲಕ.
ವೆಂಕಟೇಶ್ ನಿನ್ನೆ ತಮ್ಮ ಮನೆಯ ಹಿಂಭಾಗದಲ್ಲಿದ್ದ ಬಾಳೆಗಿಡವನ್ನು ಕಡಿಯುವಾಗ ಕಡಜದ ಹುಳುಗಳ ಗೂಡಿಗೆ ಹಾನಿ ಉಂಟಾಗಿತ್ತು. ಇದರಿಂದ ಹುಳುಗಳು, ಮೊದಲು ವೆಂಕಟೇಶ್ ಅವರಿಗೆ ಕಚ್ಚಿವೆ. ನಂತರ ಅವರ ಜೊತೆಯಲ್ಲಿದ್ದ ಬಾಲಕ ನಿಷ್ಮಿತ್ಗೂ ಕಚ್ಚಿವೆ. ಹುಳುಗಳು ಕಚ್ಚಿದ ಪರಿಣಾಮ ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಇಬ್ಬರನ್ನೂ ಸಾಗರದ ಹೆಗ್ಗೂಡು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಹುಳುಗಳು ಕಚ್ಚಿದ ಪರಿಣಾಮ ಇಬ್ಬರ ದೇಹ ಹಸಿರು ಬಣ್ಣಕ್ಕೆ ತಿರುಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಇಂದು ನಿಷ್ಮಿತ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೆಂಕಟೇಶ್ ಅವರ ಪರಿಸ್ಥಿತಿ ಸುಧಾರಿಸಿದೆ. ಸದ್ಯ ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ ಎಂದು ಮೃತ ಬಾಲಕನ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮೃತ ಬಾಲಕ ನಿಷ್ಮಿತ್ ಅವರ ತಾಯಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರು ನೀಡಿದ ದೂರಿನನ್ವಯ ಯುಡಿಆರ್ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೂಲಿ ಮಾಡಿಕೊಂಡು ಜೀವನ ನಡೆಸುವ ವೆಂಕಟೇಶ್ ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದ ಸಾಗರ ಪೊಲೀಸ್ ಠಾಣೆಯ ಎ.ಎಸ್.ಐ ಆಂತೋಣಿ ಅವರು ಶಿವಮೊಗ್ಗದಲ್ಲಿ ಮರಣೋತ್ತರ ಪರೀಕ್ಷೆ, ಹತ್ತಿಸರ ಗ್ರಾಮಕ್ಕೆ ಬಾಲಕನ ಶವ ತೆಗೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.