ತುಮಕೂರು: ಕಟ್ಟಡದ ಪಿಲ್ಲರ್ ಬಿದ್ದು ಶಾಲಾ ಬಾಲಕ ಸಾವು!building-pillar fall student death
ತುಮಕೂರು: ಕಟ್ಟಡದ ಪಿಲ್ಲರ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಶಾಲಾ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ.
ಶಾಲೆಯ ಸಮೀಪ ಇದ್ದ ಹಾಲಿನ ಡೈರಿ ಪಿಲ್ಲರ್ ಬಿದ್ದು ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಡಿಪಿಐ ರಘುಚಂದ್ರ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಹಾಲಿನ ಡೈರಿ ಕಟ್ಟಡದಲ್ಲಿ ಮೂರು ಪಿಲ್ಲರ್ಗಳಿದ್ದು, ಅದರಲ್ಲಿ ಒಂದು ಗಟ್ಟಿಯಾಗಿರಲಿಲ್ಲ. ಅದಕ್ಕೆ ತೋರಣ ಕಟ್ಟಲಾಗಿತ್ತು. ಮೂವರು ಮಕ್ಕಳು ತೋರಣ ಕಟ್ಟಿದ್ದ ಹಗ್ಗದಲ್ಲಿ ಜೋಕಾಲಿ ಆಡಲು ಹೋಗಿದ್ದರು. ಏಕಾಏಕಿ ಗಟ್ಟಿ ಇಲ್ಲದ ಪಿಲ್ಲರ್ ಕುಸಿದುಬಿದ್ದಿದೆ. ಇದರಿಂದ ಧನುಷ್ ಎಂಬ ವಿದ್ಯಾಥಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಡಿಡಿಪಿಐ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಶಾಲೆಗೆ ಆಗಮಿಸಿದ್ದ ಬಾಲಕ, ಶಾಲೆಯ ಸಮೀಪದಲ್ಲಿರುವ ನಂದಿನಿ ಡೈರಿ ಕಟ್ಟಡದ ಬಳಿ ಆಟವಾಡುತ್ತಿದ್ದ. ಈ ವೇಳೆ, ಕಟ್ಟಡದ ಪಿಲ್ಲರ್ ಕುಸಿದು ಆತನ ತಲೆಯ ಮೇಲೆ ಬಿದ್ದಿದೆ. ಬಾಲಕನ ತಲೆ ಮೇಲೆ ಭಾರವಾದ ಪಿಲ್ಲರ್ ಏಕಾಏಕಿ ಕುಸಿದ ಬಿದ್ದ ಪರಿಣಾಮ ಆತನ ತಲೆ ಬುರುಡೆ ಛಿದ್ರವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಧನುಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಜಿ ಸಚಿವ ಮಾಧುಸ್ವಾಮಿ ಕೂಡ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಟಡದ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.