ಆಟಿ: ಪ್ರಕೃತಿ, ಮಾನವೀಯತೆ ಮತ್ತು ಸಾಮಾಜಿಕ ಮೌಲ್ಯಗಳ ಹಬ್ಬಕೂಡಿ ಬಾಳುವ ಸಂಸ್ಕೃತಿಗೆ ಪ್ರೇರಣೆಯಾದ ಕರಾವಳಿಯ ಮಣ್ಣಿನ ನೆನಪು:ಡಾ. ಆಶಾಲತಾ ಪಿ.ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗಗೋವಿಂದ ದಾಸ ಕಾಲೇಜು, ಸುರತ್ಕಲ್
Tuesday, August 11, 2026
ತುಳುನಾಡಿನ ಸಾಂಸ್ಕೃತಿಕ ಬದುಕಿನಲ್ಲಿ ಆಟಿಗೆ ವಿಶಿಷ್ಟ ಸ್ಥಾನವಿದೆ. ಆಟಿಯು ಒಂದು ತಿಂಗಳ ಆಚರಣೆಯಷ್ಟೇ ಅಲ್ಲ; ಅದು ಪ್ರಕೃತಿ ಮತ್ತು ಮಾನವನ ಸಂಗಮವನ್ನು, ಕಷ್ಟಸುಖಗಳಲ್ಲಿ ಪರಸ್ಪರ ಭಾಗಿಯಾಗುವ ಸಮುದಾಯ ಭಾವವನ್ನು ಹಾಗೂ ಒಗ್ಗಟ್ಟಿನ ಮೌಲ್ಯಗಳನ್ನು ಮತ್ತೆ ಜೀವಂತಗೊಳಿಸುವ ಸಂಸ್ಕೃತಿಯ ಸಂಕೇತವಾಗಿದೆ. ಆ ಮೂಲಕ ಹಿರಿಯರ ಕೂಡಿಬಾಳುವ ಸಂಸ್ಕೃತಿಯನ್ನು ವರ್ತಮಾನದ ಬದುಕಿನಲ್ಲಿ ಮತ್ತೆ ಜೀವಂತಗೊಳಿಸುವ ಬದ್ಧತೆಗೆ ಸದಾ ಪ್ರೇರಣೆ ನೀಡುತ್ತದೆ. ಆದ್ದರಿಂದ ಆಟಿ ದಿನಾಚರಣೆ ಪ್ರಕೃತಿ, ಮಾನವೀಯತೆ ಮತ್ತು ಸಾಮಾಜಿಕ ಮೌಲ್ಯಗಳ ಹಬ್ಬವೂ ಹೌದು.
ಆಟಿ ನಮ್ಮ ಮಣ್ಣಿನ ನೆನಪು. ಹಿರಿಯರ ಬದುಕಿನ ಒಟ್ಟು ಅನುಭವ. ಮುಖ್ಯವಾಗಿ, ಹಿರಿತಲೆಮಾರುಗಳು ಪ್ರಕೃತಿಯೊಂದಿಗೆ ಕಟ್ಟಿಕೊಂಡಿದ್ದ ಆಪ್ತ ಸಂಬಂಧದ ಪ್ರತೀಕ. ಕಷ್ಟದ ದಿನಗಳಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದ ಸಾಮರಸ್ಯದ ಬದುಕಿನ ಸ್ಮರಣೆ. ಹೀಗಾಗಿ ಆಟಿಯನ್ನು ನೆನಪಿಸಿಕೊಳ್ಳುವುದು ಕೇವಲ ಹಳೆಯ ಆಚರಣೆಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ; ಅದರೊಳಗಿನ ಮಾನವೀಯ ಮೌಲ್ಯಗಳನ್ನು ಇಂದಿನ ತಾಂತ್ರಿಕ ಬದುಕಿಗೆ ಅಳವಡಿಸಿಕೊಳ್ಳುವುದೂ ಆಗಿದೆ.
ಪ್ರಕೃತಿಯೊಂದಿಗೆ ಸಹಬಾಳ್ವೆ:
ಆಟಿ ಆಚರಣೆಯ ಮೊದಲ ಪಾಠವೇ ಪ್ರಕೃತಿಯೊಂದಿಗೆ ಸಹಬಾಳ್ವೆಯ ಬದುಕು. ಹಿರಿಯರ ಪಾಲಿಗೆ ಮಣ್ಣು ಬದುಕಾಗಿತ್ತು; ನೀರು ಜೀವವಾಗಿತ್ತು; ಕಾಡು ಸಂಪತ್ತಾಗಿತ್ತು; ಮಳೆ ಆಸರೆಯಾಗಿತ್ತು; ಕೃಷಿ ಸಂಸ್ಕೃತಿಯಾಗಿತ್ತು. ಪ್ರಕೃತಿಯ ಬದಲಾವಣೆಗಳಿಗೆ ಅನುಗುಣವಾಗಿ ಬದುಕುವುದನ್ನು ಅವರು ಕಲಿತಿದ್ದರು. ಪ್ರಕೃತಿ ಸ್ನೇಹೀ ಬದುಕಿಗೆ ಹೆಚ್ಚು ಆದ್ಯತೆ ನೀಡಿದ್ದರು.
ಸ್ಥಳೀಯವಾಗಿ ದೊರೆಯುತ್ತಿದ್ದ ಸೊಪ್ಪು, ತರಕಾರಿ, ಹಣ್ಣು, ಗೆಡ್ಡೆಗೆಣಸುಗಳು ಮತ್ತು ಔಷಧೀಯ ಸಸ್ಯಗಳು ಅವರ ಆಹಾರ ಹಾಗೂ ಆರೋಗ್ಯಪಾಲನೆಯ ಭಾಗವಾಗಿದ್ದವು. ಆಷಾಢದ ಮಳೆಗಾಲಕ್ಕೆ ಸಂಬಂಧಿಸಿದ ಆಟಿ ತಿಂಗಳು ಸ್ಥಳೀಯ ಆಹಾರ ಪದ್ಧತಿ, ಔಷಧೀಯ ಸಸ್ಯಗಳು, ಜನಪದ ಆಚರಣೆಗಳು ಮತ್ತು ಸರಳ ಜೀವನಕ್ರಮಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ.
ಆಟಿ ಅಮಾವಾಸ್ಯೆಯಂದು ಪಾಲೆಮರದ ಕಷಾಯ ಸೇವಿಸುವುದು, ಪೂರ್ವಜರನ್ನು ಸ್ಮರಿಸುವುದು ಹಾಗೂ ಸ್ಥಳೀಯ ಆಚರಣೆಗಳನ್ನು ಪಾಲಿಸುವುದು ತುಳುನಾಡಿನ ಜನಜೀವನದಲ್ಲಿ ಕಂಡುಬರುವ ಪ್ರಮುಖ ಸಂಪ್ರದಾಯಗಳು. ಈ ಆಚರಣೆಗಳಲ್ಲಿ ಆರೋಗ್ಯಪ್ರಜ್ಞೆ, ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅಳಿದುಹೋದ ಹಿರಿಮನಸುಗಳ ಜ್ಞಾನಕ್ಕೆ ಸಲ್ಲಿಸುವ ಗೌರವ ಅಡಕವಾಗಿದೆ. ಇವುಗಳನ್ನು ಅಂಧಾನುಕರಣದ ದೃಷ್ಟಿಯಿಂದ ನೋಡುವ ಬದಲು, ಅವುಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರಸಂಬಂಧಿ ಆಶಯಗಳನ್ನು ಯುವ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕಿದೆ.
ಇಂದು ಅಭಿವೃದ್ಧಿಯ ವೇಗದಲ್ಲಿ ಪ್ರಕೃತಿಯೊಂದಿಗಿನ ಸಂಬಂಧ ನಿಧಾನವಾಗಿ ಸಡಿಲವಾಗುತ್ತಿದೆ. ಅತಿಯಾದ ನಗರೀಕರಣ, ಅರಣ್ಯನಾಶ, ನೀರಿನ ದುರ್ಬಳಕೆ, ಪ್ಲಾಸ್ಟಿಕ್ ಬಳಕೆ ಮತ್ತು ಜೀವವೈವಿಧ್ಯದ ಕ್ಷೀಣತೆ ಮುಂದಿನ ಪೀಳಿಗೆಗೆ ಗಂಭೀರ ಸವಾಲುಗಳನ್ನು ಒಡ್ಡುತ್ತಿವೆ. ಪ್ರಕೃತಿಯನ್ನು ಜೀವಂತ ವ್ಯವಸ್ಥೆಯಾಗಿ ಕಾಣುವಲ್ಲಿ ಸಮಾಜ ವೈಫಲ್ಯ ಕಂಡಿದೆ.
ಹೀಗಾಗಿ ಆಟಿ ದಿನಾಚರಣೆ ಪರಿಸರಪ್ರಜ್ಞೆ ಮೂಡಿಸುವ ಸಂದರ್ಭವಾಗಬೇಕು. ಸ್ಥಳೀಯ ಆಹಾರ ಪದ್ಧತಿಗಳನ್ನು ಉಳಿಸುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸ್ಥಳೀಯ ಸಸ್ಯಸಂಪತ್ತನ್ನು ಸಂರಕ್ಷಿಸುವುದು ಆಟಿಯ ಆಶಯಗಳನ್ನು ಇಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಕೆಲವು ಮಾರ್ಗಗಳಾಗಿವೆ.
ಆಟಿ ಆಚರಣೆಗಳು ಕೇವಲ ನೆನಪಿನ ಕಾರ್ಯಕ್ರಮಗಳಾಗಿ ಉಳಿಯಬಾರದು. ಅವು ಪರಿಸರ ಸಂರಕ್ಷಣೆಯ ಕ್ರಿಯಾಶೀಲ ಸಂಕಲ್ಪಗಳಾಗಬೇಕು. ಮುಂದಿನ ಪೀಳಿಗೆಗೆ ನಾವು ಉಳಿಸಿರುವ ಪ್ರಾಕೃತಿಕ ಜಗತ್ತಿನ ಬಗ್ಗೆ ಪ್ರತಿಯೊಬ್ಬರೂ ಆತ್ಮವಲೋಕನ ಮಾಡಬೇಕಾದ ಜವಾಬ್ದಾರಿಯನ್ನು ಆಟಿ ಪ್ರೇರೇಪಿಸಬೇಕು.
ಕಷ್ಟದಲ್ಲಿ ಕೈಹಿಡಿಯುವ ಸಂಸ್ಕೃತಿ:
ನಮ್ಮ ಹಿರಿಯರ ಬದುಕಿನಲ್ಲಿ ಕಷ್ಟಗಳು ಕಡಿಮೆ ಇರಲಿಲ್ಲ. ಪ್ರಕೃತಿ ವಿಕೋಪಗಳು ಸಂಭವಿಸುತ್ತಿದ್ದವು; ಬೆಳೆ ನಷ್ಟವಾಗುತ್ತಿತ್ತು; ಆಹಾರದ ಕೊರತೆ ಉಂಟಾಗುತ್ತಿತ್ತು; ಆರ್ಥಿಕ ಸಂಕಷ್ಟಗಳು ಎದುರಾಗುತ್ತಿದ್ದವು. ಆದರೆ ಅಂತಹ ಸಂದರ್ಭಗಳಲ್ಲಿ ಮನುಷ್ಯ ಒಬ್ಬನೇ ಬದುಕುತ್ತಿರಲಿಲ್ಲ. ಪ್ರತಿಯೋರ್ವರ ಬದುಕಿನ ಸವಾಲುಗಳಲ್ಲಿ ಸಮುದಾಯದ ಪಾಲುದಾರಿಕೆ ಇತ್ತು. ಕುಟುಂಬ, ನೆರೆಹೊರೆ ಮತ್ತು ಸಮುದಾಯ ಪರಸ್ಪರ ನೆರವಾಗುತ್ತಿದ್ದವು. ಒಬ್ಬರ ಮನೆಯ ಕಷ್ಟ ಮತ್ತೊಬ್ಬರ ಮನೆಯ ಕಾಳಜಿಯಾಗುತ್ತಿತ್ತು. ಕಷ್ಟಸುಖಗಳಿಗೆ ಹೆಗಲುಕೊಡುವ ಬಾಂಧವ್ಯ ಮತ್ತು ಒಗ್ಗಟ್ಟಿನ ಬದುಕು ಅಂದಿನ ಸಮಾಜದ ಬಲವಾಗಿತ್ತು. ಇಂದು ನಮ್ಮ ಬಳಿ ತಂತ್ರಜ್ಞಾನವಿದೆ, ಹಣವಿದೆ, ಸೌಲಭ್ಯಗಳಿವೆ. ವಿಶ್ವದ ಯಾವುದೇ ಮೂಲೆಯಲ್ಲಿರುವವರನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸುವ ಸಾಧನಗಳಿವೆ. ಆದರೆ ಸಹಜವಾದ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸಿದೆ! ನಮ್ಮ ಸಂಪರ್ಕ ಹೆಚ್ಚಾಗಿದೆಯೇ ಅಥವಾ ಮನುಷ್ಯ ಸಂಬಂಧಗಳು ಕಡಿಮೆಯಾಗಿವೆಯೇ?
ತಂತ್ರಜ್ಞಾನವು ಸಂಪರ್ಕದ ಸಾಧನಗಳನ್ನು ಹೆಚ್ಚಿಸಿದೆ; ಆದರೆ ಅದು ಮಾನವೀಯ ಸಮೀಪತೆಯನ್ನು ಖಾತ್ರಿಪಡಿಸಿಲ್ಲ. ವೃದ್ಧರು, ಅನಾರೋಗ್ಯಪೀಡಿತರು ನಮ್ಮ ಸುತ್ತಮುತ್ತಲೇ ಇದ್ದಾರೆ. ಅವರ ನೋವನ್ನು ಗಮನಿಸುವುದು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಆಟಿ ದಿನಾಚರಣೆ ಇಂತಹ ಮಾನವೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಂದರ್ಭವಾಗಬೇಕು. ನೆರೆಹೊರೆಯವರೊಂದಿಗೆ ಸಂಪರ್ಕ ಬೆಳೆಸುವುದು, ಅಗತ್ಯವಿರುವವರಿಗೆ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದನೆ ನೀಡುವುದು ಆಚರಣೆಯ ಅರ್ಥವನ್ನು ಇನ್ನಷ್ಟು ಗಾಢಗೊಳಿಸುತ್ತದೆ.
ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ
ಸಂಸ್ಕೃತಿ ಎಂದರೆ ಕೇವಲ ಆಹಾರ, ಉಡುಗೆ, ಸಂಪ್ರದಾಯ ಮತ್ತು ಆಚರಣೆಗಳ ಮೊತ್ತವಲ್ಲ. ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವುದು, ಭಿನ್ನತೆಯನ್ನು ಸ್ವೀಕರಿಸುವುದು, ಅಸಹಾಯಕ ಧ್ವನಿಗಳಿಗೆ ಧ್ವನಿಯಾಗಿ ಯಾರನ್ನೂ ಹೊರಗಿಡದಿರುವ ಸಂಸ್ಕಾರವೂ ಆಗಿದೆ. ಹೀಗಾಗಿ ಎಲ್ಲರೂ ಸಮಾನವಾಗಿ ಪಾಲ್ಗೊಳ್ಳುವ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ‘ನಮ್ಮವರು’ ಎಂಬ ವಲಯದೊಳಗೆ ಎಲ್ಲರೂ ಬರಬೇಕೆಂಬ ಮನಸ್ಥಿತಿಯೇ ಆಟಿಯ ಸಹಬಾಳ್ವೆಯ ತಿರುಳು. ಜನಪದ ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಕೇವಲ ಹೊರ ರೂಪದ ಸಂಸ್ಕೃತಿಯ ಸೊಗಡನ್ನು ಮಾತ್ರ ಉಳಿಸಿಕೊಳ್ಳದೆ, ಅದರೊಳಗಿನ ಸಮಾನತೆ, ಸಹಕಾರ ಮತ್ತು ಮಾನವೀಯತೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯೂ ಮುಖ್ಯವಾಗಿದೆ.
ಸಂಕಲ್ಪದ ದಿನವಾಗಲಿ
ಆಟಿ ಕೇವಲ ಹಬ್ಬವಲ್ಲ; ಅದು ಪ್ರಕೃತಿ ಮತ್ತು ಸಮುದಾಯದ ಬದುಕಿನ ನೆನಪು, ಸಹಬಾಳ್ವೆಯ ಮೂಲತತ್ವ ಮತ್ತು ಪ್ರಾಯೋಗಿಕವಾಗಿ ಒಳಗೊಳ್ಳುವಿಕೆಯನ್ನು ಬೆಂಬಲಿಸುವ ಸಂಸ್ಕಾರ. ಆದ್ದರಿಂದ ಆಟಿ ದಿನಾಚರಣೆ ಭೂತಕಾಲವನ್ನು ನೆನಪಿಸಿಕೊಳ್ಳುವ ದಿನಕ್ಕೆ ಸೀಮಿತವಾಗದೆ, ವರ್ತಮಾನವನ್ನು ವಿಮರ್ಶಿಸಿ ಭವಿಷ್ಯವನ್ನು ರೂಪಿಸುವ ಸಂಕಲ್ಪದ ದಿನವಾಗಬೇಕು. ಪ್ರಕೃತಿಯನ್ನು ಉಳಿಸುವ ಬದುಕು, ಕಷ್ಟದಲ್ಲಿ ಕೈಹಿಡಿಯುವ ಸಮಾಜ, ಭಿನ್ನತೆಯನ್ನು ಗೌರವಿಸುವ ಮನಸ್ಸು ಮತ್ತು ಎಲ್ಲರನ್ನೂ ಒಳಗೊಂಡ ಮಾನವೀಯ ಸಂಸ್ಕೃತಿ–ಇವೇ ಆಟಿಯ ನಿಜವಾದ ಮೌಲ್ಯಗಳು.
ಆಟಿಯ ಆಚರಣೆ ನಮ್ಮ ನಡೆ–ನುಡಿಗಳಲ್ಲೂ ಜೀವಂತವಾಗಲಿ. ಪ್ರಕೃತಿಯನ್ನು ಉಳಿಸೋಣ. ಮಾನವೀಯ ಮೌಲ್ಯಗಳನ್ನು ಗೌರವಿಸೋಣ.