ಬೆಂಗಳೂರು :ತನಿಖೆಗೆ ತೆರಳಿದ್ದ ಬೆಂಗಳೂರು ಇನ್ಸ್‌ಪೆಕ್ಟರ್ ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಬಲಿ: ಪ್ರಪಾತಕ್ಕೆ ಉರುಳಿದ ಬಸ್!

ಬೆಂಗಳೂರು/ಭೋಪಾಲ್: ಸೈಬರ್ ಕ್ರೈಂ ಪ್ರಕರಣವೊಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಕೆ.ಬಿ. (Ravi KB) ಅವರು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭೋಪಾಲ್‌ನಿಂದ ಇಂದೋರ್‌ಗೆ ಸ್ಲೀಪರ್ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ರಾಜಘರ್ ಸಮೀಪ ಎಬಿ ರಸ್ತೆಯ ಫ್ಲೈ ಓವರ್ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ (ಸೈಬರ್ ಕ್ರೈಂ) ಠಾಣೆಯ ಇನ್ಸ್‌ಪೆಕ್ಟರ್ ರವಿ ಅವರನ್ನೊಳಗೊಂಡ ಒಂಬತ್ತು ಜನರ ತಂಡವು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ಆ ಪೈಕಿ ಆರು ಸಿಬ್ಬಂದಿ ಆರೋಪಿಗಳೊಂದಿಗೆ ವಾಪಸಾಗಿದ್ದರೆ, ಇನ್ಸ್‌ಪೆಕ್ಟರ್ ರವಿ ಹಾಗೂ ಇಬ್ಬರು ಸಿಬ್ಬಂದಿ ಇನ್ನುಳಿದ ಆರೋಪಿಗಳ ಪತ್ತೆಗೆ ಇಂದೋರ್‌ಗೆ ತೆರಳುತ್ತಿದ್ದರು. ಬಸ್ ನಿಯಂತ್ರಣ ತಪ್ಪಿ ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.