ಜಿಲ್ಲೆಯ ನೆಮ್ಮದಿ ಕೆಡಿಸುವ ದುರುದ್ದೇಶದ ‘ಪುತ್ತೂರು ಚಲೋ’; ಬಿಜೆಪಿಯ ಬೇಜವಾಬ್ದಾರಿ ರಾಜಕಾರಣವನ್ನು ಜನತೆ ಸೋಲಿಸಬೇಕು: ಸಿಪಿಐಎಂ

ಜಿಲ್ಲೆಯ ನೆಮ್ಮದಿ ಕೆಡಿಸುವ ದುರುದ್ದೇಶದ ‘ಪುತ್ತೂರು ಚಲೋ’; ಬಿಜೆಪಿಯ ಬೇಜವಾಬ್ದಾರಿ ರಾಜಕಾರಣವನ್ನು ಜನತೆ ಸೋಲಿಸಬೇಕು: ಸಿಪಿಐಎಂ


ಮಂಗಳೂರು: ಪುತ್ತೂರಿನ ದರ್ಬೆಯಲ್ಲಿ ಗ್ರಾಹಕರು ಹಾಗೂ ಜೆರಾಕ್ಸ್ ಅಂಗಡಿ ಮಾಲಕರ ನಡುವೆ ನಡೆದ ವಾಗ್ವಾದ ಮತ್ತು ಜಗಳಕ್ಕೆ ಕೋಮು ಬಣ್ಣ ಹಚ್ಚಿ, ಜಿಲ್ಲೆಯ ಸೌಹಾರ್ದ ವಾತಾವರಣವನ್ನು ಕೆಡಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

ಕೋಮು ಹಿಂಸೆಯ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರನ್ನು ಗುರಿಯಾಗಿಸಿ, ಮತೀಯ ಸಂಘರ್ಷದ ಮೂಲಕ ಜಿಲ್ಲೆಯ ನೆಮ್ಮದಿ ಕೆಡಿಸಿ ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡುವ ದುರುದ್ದೇಶದಿಂದ ಸಂಘ ಪರಿವಾರವು ‘ಪುತ್ತೂರು ಚಲೋ’ ಹಮ್ಮಿಕೊಂಡಿದೆ ಎಂದು ಸಮಿತಿ ಆರೋಪಿಸಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕೋಮು ಸಂಘರ್ಷದ ಚಟುವಟಿಕೆಗಳಿಗೆ ತಡೆ ಬಿದ್ದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹತೋಟಿಯಲ್ಲಿದೆ. ಇದರಿಂದ ಜನರು ಒಂದಷ್ಟು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಸಿಪಿಐಎಂ ಹೇಳಿದೆ.

ಕೋಮುವಾದಿ ಚಟುವಟಿಕೆಗಳನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿಕೊಂಡು ಚುನಾವಣಾ ಲಾಭಕ್ಕಾಗಿ ಬಳಸುತ್ತಾ ಬಂದಿರುವ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಈ ಬೆಳವಣಿಗೆ ಸಹಿಸಲಾಗುತ್ತಿಲ್ಲ ಎಂದು ಸಮಿತಿ ಟೀಕಿಸಿದೆ.

ಮತೀಯ ಸಂಘರ್ಷದ ಮೂಲಕ ಹಿಂದೂ-ಮುಸ್ಲಿಂ ಮತೀಯ ಧ್ರುವೀಕರಣಕ್ಕೆ ಅವಕಾಶ ಇಲ್ಲದಿದ್ದರೆ ಚುನಾವಣೆಯಲ್ಲಿ ಹಿನ್ನಡೆಯಾಗುವ ಆತಂಕದಿಂದ ಬಿಜೆಪಿ ಚಡಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೋಮು ಹಿಂಸೆ ಹುಟ್ಟುಹಾಕಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಪಿಐಎಂ ಆರೋಪಿಸಿದೆ.

ಜಿಲ್ಲಾ ಎಸ್‌ಪಿ ಡಾ. ಅರುಣ್ ಅವರ ಕಟ್ಟುನಿಟ್ಟಿನ ಕ್ರಮಗಳು ಕೋಮು ಶಕ್ತಿಗಳ ಈ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿವೆ ಎಂದು ಸಮಿತಿ ತಿಳಿಸಿದೆ.

ಈಗ ಪುತ್ತೂರು ದರ್ಬೆಯಲ್ಲಿ ನಡೆದಿರುವ ಸಾಮಾನ್ಯ ಜಗಳಕ್ಕೆ ಹಿಂದೂ-ಮುಸ್ಲಿಂ ಬಣ್ಣ ಹಚ್ಚಿ ಸಂಘರ್ಷ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಆ ಮೂಲಕ ಜಿಲ್ಲಾ ಎಸ್‌ಪಿಯವರನ್ನು ನೈತಿಕವಾಗಿ ಕುಗ್ಗಿಸುವ ಹಾಗೂ ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡುವ ಉದ್ದೇಶದಿಂದ ಸಂಘ ಪರಿವಾರ ಪ್ರಯತ್ನ ನಡೆಸುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ.

ಇದರ ಭಾಗವಾಗಿಯೇ ಎಲ್ಲಾ ಶಕ್ತಿ ಬಳಸಿ ‘ಪುತ್ತೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿರುವ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಜಿಲ್ಲೆಯ ಜನತೆ ಸಂಘ ಪರಿವಾರ ಮತ್ತು ಬಿಜೆಪಿಯ ಹುನ್ನಾರಗಳನ್ನು ಅರ್ಥ ಮಾಡಿಕೊಂಡು ‘ಪುತ್ತೂರು ಚಲೋ’ದ ದುರುದ್ದೇಶವನ್ನು ವಿಫಲಗೊಳಿಸಬೇಕು ಎಂದು ಮನವಿ ಮಾಡಿದೆ.

Ads on article

Advertise in articles 1

advertising articles 2

Advertise under the article