ಸಿದ್ಧಾಪುರ :ಗೃಹಪ್ರವೇಶದಲ್ಲಿ ವಿಭಿನ್ನ ಪ್ರಯೋಗ: ‘ವಂದೇ ಮಾತರಂ’ ಸೆಲ್ಫಿ ಪಾಯಿಂಟ್ ನಿರ್ಮಿಸಿ ದೇಶಭಕ್ತಿ ಮೆರೆದ ಸರ್ಕಾರಿ ಶಿಕ್ಷಕಿ!
Friday, August 28, 2026
ಸಿದ್ಧಾಪುರ :ಸಾಮಾನ್ಯವಾಗಿ ಗೃಹಪ್ರವೇಶ ಎಂದರೆ ಮನೆಯ ಅಲಂಕಾರ, ಹೂವು ಹಾಗೂ ಲೈಟಿಂಗ್ಸ್‌ಗೆ ಆದ್ಯತೆ ನೀಡಲಾಗುತ್ತದೆ. ಆದರೆ ಸಿದ್ದಾಪುರದ ಬಳಿಯ ರವಿನಗರದಲ್ಲಿ ಹೊಸ ಮನೆ ನಿರ್ಮಿಸಿರುವ ಕಾರಟಗಿ ಸರ್ಕಾರಿ ಶಾಲೆಯ ಹಿರಿಯ ಶಿಕ್ಷಕಿ ಅನ್ನಪೂರ್ಣ ಸಜ್ಜನ್ ಅವರು ತಮ್ಮ ಮನೆ ಗೃಹಪ್ರವೇಶವನ್ನು ಅತ್ಯಂತ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.ಮನೆಗೆ ಆಗಮಿಸುವ ಅತಿಥಿಗಳಿಗೆ ‘ವಂದೇ ಮಾತರಂ’ ಗೀತೆಯ ಮಹತ್ವ ತಿಳಿಸುವ ಉದ್ದೇಶದಿಂದ, ಮನೆಯ ಮುಂಭಾಗದಲ್ಲೇ ವಂದೇ ಮಾತರಂ ಗೀತೆಯ ಪೂರ್ಣ ಸಾಲುಗಳನ್ನೊಳಗೊಂಡ ‘ಸೆಲ್ಫಿ ಸ್ಪಾಟ್’ ನಿರ್ಮಿಸಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ದೇಶವನ್ನು ಒಗ್ಗೂಡಿಸಿದ ಈ ಗೀತೆಯ ಸುತ್ತ ಪ್ರಸ್ತುತ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದ ಪ್ರಮುಖರೂ ಆಗಿರುವ ಶಿಕ್ಷಕಿಯ ಈ ದೇಶಭಕ್ತಿಯ ಕಾರ್ಯಕ್ಕೆ ಬಂದಿದ್ದ ಅತಿಥಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.