ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಬೃಹತ್ ಪ್ರತಿಭಟನೆ: ಬೇಡಿಕೆಗಳಿವು.
ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸುಮಾರು 2 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಶಿವಮೊಗ್ಗ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಗೌರವಧನ ಎನ್ನುವ ಹಣೆಪಟ್ಟಿಯನ್ನು ತೆಗೆದು ತಮ್ಮನ್ನು ಖಾಯಂ ನೌಕರರೆಂದು ಪರಿಗಣಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ 26 ಸಾವಿರ ರೂಪಾಯಿ ಹಾಗೂ ಸಹಾಯಕರಿಗೆ 20 ಸಾವಿರ ರೂ. ನೀಡಬೇಕು ಎಂಬುದೂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಪಾಲಿಕೆ ಆವರಣದಿಂದ ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತದಿಂದ ಬಾಲರಾಜ್ ಅರಸ್ ರಸ್ತೆಯಿಂದ ಮಹಾವೀರ ವೃತ್ತದಿಂದ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಇಂದು ತಮ್ಮ ಅಂಗನವಾಡಿ ಕೆಲಸವನ್ನು ಬಿಟ್ಟು ಹೋರಾಟಕ್ಕೆ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ವಾರಿಯರ್ ಆಗಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದೇವೆ. ಕೋವಿಡ್ ಕರ್ತವ್ಯದಲ್ಲಿದ್ದಾಗ ಅನೇಕ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರದ ಕೆಲಸ ಮಾಡಿದರೂ ನಮ್ಮನ್ನು ಸರ್ಕಾರ ಇದುವರೆಗೂ ಖಾಯಂ ನೌಕರರನ್ನಾಗಿ ಮಾಡಿಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ವಿಶೇಷ ಮಕ್ಕಳನ್ನು ಎನ್‌ಆರ್‌ಸಿಗೆ ಕಳುಹಿಸುವುದು, ಪೌಷ್ಟಿಕ ಆಹಾರ ಮತ್ತು ಸಂಬಂಧಪಟ್ಟ ಔಷಧಿಗಳನ್ನು ಕೊಡಿಸುವುದು, ಬಿಎಲ್ಓ ಗಳಾಗಿ ಕೆಲಸ ಮಾಡುತ್ತಿರುವುದು, ಗರ್ಭಣಿ, ಬಾಣಂತಿಯರಿಗೆ ಪೋಷಣ್ ಅಭಿಯಾನದಲ್ಲಿ ಟ್ರ್ಯಾಕರ್ ಮಾಡುವುದು, ಗರ್ಭಿಣಿಯರ ಮಾತೃ ವಂದನ ಅರ್ಜಿ ತುಂಬುವುದು, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡುವುದು, ಗೃಹಲಕ್ಷ್ಮಿ ಸರ್ವೆ, ಶಾಲೆ ಬಿಟ್ಟ ಮಕ್ಕಳ ಸರ್ವೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೀಗೆ ಹಲವು ಸರ್ವೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ.
ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗೌರವಧನ ಎಂಬ ಹೆಸರಿನಲ್ಲಿ ಗೌರವ ಕಾರ್ಯಕರ್ತೆಯರನ್ನಾಗಿ ತೆಗೆದುಕೊಂಡು ಸರ್ಕಾರ ಮಹಿಳೆಯರನ್ನು ಶೋಷಿಸುತ್ತಿದೆ. ನಮಗೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣ ಮಾಡುವುದಾಗಿ ಹೇಳುತ್ತಿವೆ. ಆದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಈಗಲಾದರೂ ಕನಿಷ್ಟ ವೇತನ ಜಾರಿ ಮಾಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಬೇಕೆಂಬ ಬೇಡಿಕೆಯ ಜೊತೆಗೆ 24 ಬೇಡಿಕೆಗಳನ್ನಿಡಲಾಗಿದೆ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ಪ್ರೇಮಾ ಮಾತನಾಡಿ, "ಗೌರವಧನದಿಂದ ಕನಿಷ್ಠ ಮೂಲ ವೇತನಕ್ಕೆ ತರಬೇಕು. ನಾವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುವ ಕೆಲಸಗಳಿಗೆ ಅಲ್ಲದೆ, ಬೇರೆ ಇಲಾಖೆಯ ಕೆಲಸಗಳಿಗೆ ನಮ್ಮನ್ನು ನೇಮಕ ಮಾಡಬಾರದು. ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದಲ್ಲಿ ನಮಗೆ ನೀಡಿರುವ ಮೊಬೈಲ್ ಸರಿಯಾಗಿ ನಿರ್ವಹಿಸುತ್ತಿಲ್ಲ. ಕೇಂದ್ರ ಸರ್ಕಾರವು 1,500 ರೂ ಗೌರವಧನ ಹೆಚ್ಚಳ ಮಾಡಿದ್ದು, ಬಿಟ್ಟರೆ ಇದುವರೆಗೂ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲ. ಅಲ್ಲದೆ ರಾಜ್ಯ ಸರ್ಕಾರದಿಂದ ಪ್ರಾರಂಭಿಸಿದ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ಒಟ್ಟು 24 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ತಮ್ಮ ಮನವಿಯನ್ನು ಪರಿಗಣಿಸದೆ ಹೋದರೆ ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಪ್ರತಿಭಟನೆ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.