ಬೆಂಗಳೂರು :SIR ಕರಡು ಪಟ್ಟಿ ಪ್ರಕಟ ;ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ ಕೊಳ್ಳಿ.
ರಾಜ್ಯದಲ್ಲಿ SIR ಆರಂಭವಾದ ಸಂದರ್ಭದಲ್ಲಿ ಒಟ್ಟು 5,54,32,314 ಮತದಾರರು ಇದ್ದರು. ಈ ಪೈಕಿ 4,46,35,899 ಮತದಾರರ ಮಾಹಿತಿಯನ್ನು ಡಿಜಿಟೈಸ್ ಮಾಡಲಾಗಿದ್ದು, 1,07,96,415 ಮಂದಿಯನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ಈ ವರ್ಗದ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಟ್ಟಿರುವ ಸಾಧ್ಯತೆ ಇದೆ.
SIR ವೇಳೆ 2002ರ ಮತದಾರರ ಪಟ್ಟಿಯೊಂದಿಗೆ ವಿವರಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗದ ಹಾಗೂ ಮತದಾರರ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಒಟ್ಟು 43,80,740 ಮತದಾರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದ್ದು, ಈ ಪೈಕಿ 20,35,312 ಮಂದಿ ‘ಅನಮಾಲೀಸ್’ ಹಾಗೂ 23,45,428 ಮಂದಿ ‘ನೋ ಮ್ಯಾಪಿಂಗ್’ ವರ್ಗದಲ್ಲಿದ್ದಾರೆ. ಬೆಂಗಳೂರಿನ ವ್ಯಾಪ್ತಿಯಲ್ಲೇ ಸುಮಾರು 24,05,990 ಮಂದಿಗೆ ನೋಟಿಸ್ ನೀಡಲಾಗುತ್ತದೆ.
ನೋ ಮ್ಯಾಪಿಂಗ್’ ಎಂದರೆ ಮತದಾರರ ಅಥವಾ ಅವರ ಪೋಷಕರ ವಿವರಗಳನ್ನು ಹಿಂದಿನ ಮತದಾರರ ಪಟ್ಟಿಯೊಂದಿಗೆ ಜೋಡಿಸಲು ಸಾಧ್ಯವಾಗದ ಪ್ರಕರಣಗಳು. ‘ಅನಮಾಲೀಸ್’ ಎಂದರೆ ಹೆಸರು, ವಯಸ್ಸು ಅಥವಾ ಇತರ ಮತದಾರರ ವಿವರಗಳಲ್ಲಿ ತಾರ್ಕಿಕ ವ್ಯತ್ಯಾಸ ಕಂಡುಬಂದ ಪ್ರಕರಣಗಳು.
SIRನ ಪ್ರಸ್ತುತ ಲೆಕ್ಕಾಚಾರದ ಪ್ರಕಾರ ಸುಮಾರು 1.07 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸದಿರುವ ಸಾಧ್ಯತೆ ಇದೆ. ಆದರೆ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಅವರ ಮತದಾನದ ಹಕ್ಕು ಅಂತಿಮವಾಗಿ ರದ್ದಾಗಿದೆ ಎಂದರ್ಥವಲ್ಲ. ಅರ್ಹ ಮತದಾರರು ನಿಗದಿತ ಪ್ರಕ್ರಿಯೆಯ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕರಡು ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ
ಚುನಾವಣಾ ಆಯೋಗದ ಅಧಿಕೃತ Voters’ Services Portalನಲ್ಲಿ ಕರ್ನಾಟಕದ SIR ಕರಡು ಮತದಾರರ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು. SIR ಕರಡು ಮತದಾರರ ಪಟ್ಟಿ
ವೆಬ್‌ಸೈಟ್‌ಗೆ ತೆರಳಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿ, ಬಳಿಕ ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಬೂತ್ ಸಂಖ್ಯೆಯನ್ನು ಆಯ್ಕೆ ಮಾಡಬೇಕು. ಕ್ಯಾಪ್ಚಾ ಕೋಡ್ ನಮೂದಿಸಿದ ಬಳಿಕ ಸಂಬಂಧಪಟ್ಟ ಬೂತ್‌ನ ಮತದಾರರ ಪಟ್ಟಿಯ PDF ಡೌನ್‌ಲೋಡ್ ಮಾಡಿಕೊಳ್ಳಬಹುದು. ಮತದಾರರು PDFನಲ್ಲಿ ತಮ್ಮ ಹೆಸರು, ವಿಳಾಸ ಸೇರಿದಂತೆ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯವಾಗಿದೆ. ಹೆಸರು ಇಲ್ಲದಿದ್ದರೆ ಅಥವಾ ವಿವರಗಳಲ್ಲಿ ತಪ್ಪು ಕಂಡುಬಂದರೆ, ನಿಗದಿತ ಅವಧಿಯಲ್ಲಿ ಹಕ್ಕು ಅಥವಾ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ಆಗಸ್ಟ್ 24: SIR ಕರಡು ಮತದಾರರ ಪಟ್ಟಿ ಪ್ರಕಟ
- ಆಗಸ್ಟ್ 24–ಸೆಪ್ಟೆಂಬರ್ 23: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ
- ಅಕ್ಟೋಬರ್ 22: ನೋಟಿಸ್ ಪ್ರಕ್ರಿಯೆ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅಂತ್ಯ
- ಅಕ್ಟೋಬರ್ 27: ಅಂತಿಮ ಮತದಾರರ ಪಟ್ಟಿ ಪ್ರಕಟ