ಕಾಸರಗೋಡು: ಟಿವಿ ಕೆಟ್ಟುಹೋಗಿದ್ದಕ್ಕೆ ಮನನೊಂದು ವೃದ್ಧೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ.
Wednesday, August 19, 2026
ಕಾಸರಗೋಡು: ಮನೆಯ ಟಿವಿ ಕೆಟ್ಟುಹೋಗಿದ್ದರಿಂದ ತೀವ್ರ ಮನನೊಂದ ವೃದ್ಧೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕಾಶಿಮಠ ಗಡ್ಡೆಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಕಾಶಿಮಠ ಗಡ್ಡೆಯ ಸಾವಿತ್ರಿ ಪ್ರಭು (65) ಮೃತಪಟ್ಟ ವೃದ್ಧೆ.
ಮಂಗಳವಾರ ರಾತ್ರಿ ಊಟ ಮುಗಿಸಿ ಕುಟುಂಬಸ್ಥರೊಂದಿಗೆ ಮಲಗಿದ್ದ ಸಾವಿತ್ರಿ, ಬುಧವಾರ ಬೆಳಗ್ಗೆ ಮನೆಯ ಅಡುಗೆ ಕೋಣೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಪುತ್ರ ಗುರುಪ್ರಸಾದ್ ಪ್ರಭು ಬೆಳಗ್ಗೆ ಎದ್ದು ನೋಡಿದಾಗ ಈ ಭಯಾನಕ ದೃಶ್ಯ ಬೆಳಕಿಗೆ ಬಂದಿದೆ.
ಅಡುಗೆ ಕೋಣೆಯಲ್ಲಿದ್ದ ಫೈಬರ್ ಕುರ್ಚಿಯಲ್ಲಿ ಕುಳಿತು, ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿಯ ತೀವ್ರತೆಗೆ ಫೈಬರ್ ಕುರ್ಚಿ ಕರಗಿ ದೇಹಕ್ಕೆ ಅಂಟಿಕೊಂಡಿದ್ದು, ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತ ಸಾವಿತ್ರಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಏಳುವ ಅಭ್ಯಾಸ ಹೊಂದಿದ್ದರು. ಎದ್ದ ತಕ್ಷಣ ಟಿವಿ ವೀಕ್ಷಿಸುವುದು ಅವರ ದಿನಚರಿಯಾಗಿತ್ತು. ಆದರೆ ಮಂಗಳವಾರ ಟಿವಿ ಕೆಟ್ಟುಹೋಗಿದ್ದರಿಂದ ಅದನ್ನು ದುರಸ್ತಿಗೆ ಕೊಂಡೊಯ್ಯಲಾಗಿತ್ತು. ಬುಧವಾರ ಸರಿಪಡಿಸಿ ತಂದುಕೊಡುವುದಾಗಿ ಹೇಳಲಾಗಿತ್ತು. ಆದರೆ ಮಂಗಳವಾರ ಇಡೀ ದಿನ ಮನೆಯಲ್ಲಿ ಟಿವಿ ಇಲ್ಲದಿದ್ದರಿಂದ ಅವರು ತೀವ್ರ ಮಾನಸಿಕ ಒತ್ತಡ ಮತ್ತು ನಿರಾಶೆಗೆ ಒಳಗಾಗಿದ್ದರು ಎಂದು ಪುತ್ರ ಗುರುಪ್ರಸಾದ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.