ಉತ್ತರ ಪ್ರದೇಶ :1,800 ರೂ.ಗೆ ‘ದೇಸಿ ಎಸಿ’ ಕಂಡುಹಿಡಿದ 16ರ ಬಾಲಕಿ: ಜಪಾನ್ ವಿಜ್ಞಾನಿಗಳ ಗಮನ ಸೆಳೆದ ಆವಿಷ್ಕಾರವೇನು?desi innovative 16 year girl achieved

ಉತ್ತರ ಪ್ರದೇಶ :ಪ್ರತಿಯೊಬ್ಬರ ಮನೆಯಲ್ಲೂ ಬೇಸಿಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಏರ್ ಕಂಡೀಷನರ್ (AC) ಬಳಸುವ ಆಸೆ ಇರುತ್ತದೆ. ಆದರೆ ದುಬಾರಿ ಬೆಲೆ ಹಾಗೂ ಭಾರಿ ವಿದ್ಯುತ್ ಬಿಲ್ ಭಯದಿಂದ ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಎಸಿ ಪಡೆಯುವುದು ಇಂದಿಗೂ ಕನಸಾಗಿಯೇ ಉಳಿದಿದೆ. ಈ ಸಮಸ್ಯೆಗೆ ಉತ್ತರ ಪ್ರದೇಶದ ಝಾನ್ಸಿಯ 16 ವರ್ಷದ ಬಾಲಕಿ ಕಲ್ಯಾಣಿ ಶ್ರೀವಾಸ್ತವ ಕೇವಲ 1,800 ರೂಪಾಯಿ ವೆಚ್ಚದಲ್ಲಿ ‘ದೇಸಿ ಎಸಿ’ ಎಂಬ ಕಡಿಮೆ ವೆಚ್ಚದ ತಂಪು ಸಾಧನವನ್ನು ಆವಿಷ್ಕರಿಸುವ ಮೂಲಕ ಅದ್ಭುತ ಪರಿಹಾರ ಕಂಡುಕೊಂಡಿದ್ದಾಳೆ.
ಕೇವಲ 1,800 ರೂ.ನಲ್ಲಿ ‘ದೇಸಿ ಎಸಿ’ ಸಿದ್ಧ:
ವರದಿಗಳ ಪ್ರಕಾರ, ಕಲ್ಯಾಣಿ ತಯಾರಿಸಿರುವ ಈ ಸಾಧನವನ್ನು ಬಳಸಿದ ಒಂದೇ ಗಂಟೆಯಲ್ಲಿ ಕೋಣೆಯ ತಾಪಮಾನ 4 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗುತ್ತದೆ.
ಸರಳ ವಿನ್ಯಾಸ: ಥರ್ಮೋಕೋಲ್ ఐಸ್‌ಬಾಕ್ಸ್ ಹಾಗೂ 12 ವೋಲ್ಟ್ ಡಿಸಿ ಫ್ಯಾನ್ ಬಳಸಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಫ್ಯಾನ್ ಹೊರಗಿನ ಗಾಳಿಯನ್ನು ಒಳಗೆಳೆದುಕೊಂಡು, ತಂಪಾದ ಭಾಗದ ಮೂಲಕ ಕೋಣೆಗೆ ರವಾನಿಸುತ್ತದೆ.
ಸೌರಶಕ್ತಿಯ ಬಳಕೆ: ಈ ‘ದೇಸಿ ಎಸಿ’ ಸೌರಶಕ್ತಿಯ (Solar Energy) ಮೂಲಕ ಕಾರ್ಯನಿರ್ವಹಿಸುವುದರಿಂದ ಭಾರಿ ವಿದ್ಯುತ್ ಬಿಲ್ ಬರುವ ಭಯವಿರುವುದಿಲ್ಲ. ಅಲ್ಲದೆ, ಸಾಂಪ್ರದಾಯಿಕ ಎಸಿಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮವನ್ನೂ ಇದು ತಡೆಯುತ್ತದೆ.
ಸ್ಥಳೀಯ ಸಮಸ್ಯೆಗೆ ಪರಿಹಾರ: ಬುಂದೇಲ್‌ಖಂಡ್ ಪ್ರದೇಶದ ತೀವ್ರ ಬಿಸಿಲು ಹಾಗೂ ಅಲ್ಲಿನ ಬಡ ಜನರ ಪರಿಸ್ಥಿತಿಯನ್ನು ಕಂಡು ಕಲ್ಯಾಣಿ ಈ ಆವಿಷ್ಕಾರಕ್ಕೆ ಕೈಹಾಕಿದ್ದಾಳೆ.
ವಿದೇಶದಲ್ಲೂ ಹೆಗ್ಗಳಿಕೆ, ಜಪಾನ್‌ನಿಂದ ಆಹ್ವಾನ:
ಕಲ್ಯಾಣಿಯ ಈ ಸಾಧನೆಗೆ ಐಐಟಿ ದೆಹಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮಾದರಿ ಸ್ಪರ್ಧೆಯಲ್ಲಿ ಆಯ್ಕೆ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರ ಹಾಗೂ ‘ಅಮರ್ ಉಜಾಲಾ’ ನೀಡುವ ‘ನಾರಿ ಸಮ್ಮಾನ್’ ಗೌರವಕ್ಕೂ ಈಕೆ ಪಾತ್ರರಾಗಿದ್ದಾಳೆ. ಅಷ್ಟೇ ಅಲ್ಲದೆ, ಜಪಾನ್‌ನ ವಿಜ್ಞಾನಿಗಳು ಈ ಯೋಜನೆಯನ್ನು ಮೆಚ್ಚಿ ಸೆಮಿನಾರ್‌ಗೆ ಆಹ್ವಾನಿಸಿದ್ದಾರೆ.
ವಿಜ್ಞಾನದ ಜೊತೆಗೆ ಸಂಗೀತದಲ್ಲೂ ಅಪಾರ ಆಸಕ್ತಿ ಹೊಂದಿರುವ ಕಲ್ಯಾಣಿ, ‘ಇಂಡಿಯನ್ ಐಡಲ್’ ರಿಯಾಲಿಟಿ ಶೋದ 3ನೇ ಸುತ್ತಿನವರೆಗೆ ತಲುಪಿದ್ದು, 50ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದ ಬಹುಮುಖ ಪ್ರತಿಭೆಯಾಗಿದ್ದಾಳೆ.