ಬೆಂಗಳೂರು :ಮಳೆ ಅಬ್ಬರ! ವೈಟ್‌ಫೀಲ್ಡ್, ಮಾರತ್ತಹಳ್ಳಿಯಲ್ಲಿ ರಸ್ತೆಗಳು ಜಲಾವೃತ; ಮಲ್ಲೇಶ್ವರಂನಲ್ಲಿ ಕಾರುಗಳ ಮೇಲೆ ಬಿದ್ದ ಬೃಹತ್ ಮರ.
ನಗರದ ಹೃದಯಭಾಗಗಳಾದ ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ಕಾರ್ಪೋರೇಷನ್, ಕೆ.ಆರ್.ಮಾರ್ಕೆಟ್ ಹಾಗೂ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ಜೋರು ಮಳೆಯಾಗಿದೆ. ರಾತ್ರಿ ವೇಳೆ ಈ ಭಾಗಗಳಲ್ಲಿ ವಾಹನಗಳ ಓಡಾಟ ವಿರಳವಾಗಿದ್ದು, ಯಾವುದೇ ಪ್ರಮುಖ ಟ್ರಾಫಿಕ್ ಜಾಮ್ ಅಥವಾ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ.
ಆದರೆ, ವೈಟ್‌ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರು, ಬಳಗೆರೆ ಹಾಗೂ ಔಟರ್ ರಿಂಗ್ ರೋಡ್ ಸುತ್ತಮುತ್ತ ಮಳೆಯ ತೀವ್ರತೆ ಹೆಚ್ಚಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡ ಪರಿಣಾಮ ವೈಟ್‌ಫೀಲ್ಡ್ ಭಾಗದಲ್ಲಿ ತಡರಾತ್ರಿಯೂ ಟ್ರಾಫಿಕ್ ಸಮಸ್ಯೆ ತಲೆದೂರಿದ್ದು, ಸುರಿಯುವ ಮಳೆಯಲ್ಲೇ ಸಂಚಾರ ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ ಪಡುವಂತಾಯಿತು.
ಧರೆಗುರುಳಿದ ಮರ: ಇನ್ನೊಂದೆಡೆ ಮಲ್ಲೇಶ್ವರಂನ ಸ್ಮಾರ್ಟ್ ಬಜಾರ್ ಮುಂಭಾಗದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದರು.