ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಭೀಕರ ಸ್ಫೋಟ: ಬೆಂಕಿ ನಿಯಂತ್ರಣ, ಓರ್ವನಿಗೆ ಸುಟ್ಟ ಗಾಯ, ಆರು ಮಂದಿಗೆ ಸಣ್ಣಪುಟ್ಟ ಗಾಯ.

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಭೀಕರ ಸ್ಫೋಟ: ಬೆಂಕಿ ನಿಯಂತ್ರಣ, ಓರ್ವನಿಗೆ ಸುಟ್ಟ ಗಾಯ, ಆರು ಮಂದಿಗೆ ಸಣ್ಣಪುಟ್ಟ ಗಾಯ.

Blast in Mangaluru MRPL
ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಬುಧವಾರ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಸುಟ್ಟಗಾಯವಾಗಿದ್ದು, ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಸ್ಫೋಟದ ತೀವ್ರತೆಗೆ ಸಮೀಪದ ಜೋಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆ, ಕಟ್ಟಡಗಳು ನಡುಗಿದ ಅನುಭವ ಆಗಿದೆ. ಮತ್ತೊಂದೆಡೆ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸ್ಫೋಟದ ಅನುಭವವಾಗಿದೆ. ಆದರೆ ಏರ್​​ಪೋರ್ಟ್​ ನ ಯಾವುದೇ ಮೂಲಸೌಲಭ್ಯಕ್ಕೆ ಹಾನಿಯಾಗಿಲ್ಲ ಹಾಗೂ ಆಡಳಿತ ಕಚೇರಿಯ ಗ್ಲಾಸ್​ಗಳು ಅಲುಗಾಡಿಲ್ಲ ಎಂದು ವಿಮಾನ ನಿಲ್ದಾಣದ ಪಿಆರ್​​ಒ ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಎಂಆರ್‌ಪಿಎಲ್‌ನ ಸಿಹೆಚ್‌ಟಿ (CHT - Hydro Sulphur Treatment Unit) ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಂತರಿಕ ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ.

ತಂದಿದೆ.

Blast in Mangaluru MRPL

ಗಾಯಾಳುಗಳ ವಿವರ: ಘಟಕದ ಒಳಗಡೆ ಕರ್ತವ್ಯದಲ್ಲಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬುವರು ಶೇ. 35ರಷ್ಟು ಸುಟ್ಟ ಗಾಯಗಳಿಂದ ಗಾಯಗೊಂಡಿದ್ದು, ತಕ್ಷಣ ಅವರನ್ನು ಶ್ರೀನಿವಾಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿದ್ದು (ICU), ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಪಕ್ಕದ ಕಚೇರಿಯಲ್ಲಿದ್ದ ಮತ್ತಿತರ ಆರು ಮಂದಿ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿ ವಿಭಾಗದಲ್ಲಿ (OPD) ತಪಾಸಣೆ ಮತ್ತು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.

ಪೊಲೀಸ್ ಕಮಿಷನರ್ ಸ್ಪಷ್ಟನೆ – ಹಿರಿಯ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ (DC) ಹಾಗೂ ಎಂಆರ್‌ಪಿಎಲ್ ಸಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

"ಸಿಹೆಚ್‌ಟಿ ಘಟಕದಲ್ಲಿ ಸ್ಫೋಟದ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು, ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಓರ್ವ ವ್ಯಕ್ತಿಗೆ ಶೇ. 35 ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಆರು ಮಂದಿಗೆ ಸಣ್ಣ ಗಾಯಗಳಾಗಿವೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ" ಎಂದು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Blast in Mangaluru MRPL

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮಗ್ರ ತಪಾಸಣೆ: ಸ್ಫೋಟದ ತೀವ್ರತೆಗೆ ಸಮೀಪದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿಯ ಸುತ್ತಮುತ್ತ ನಡುಗಿದ ಅನುಭವ ಆಗಿದೆ. ಜಿಲ್ಲಾಡಳಿತದ ಸೂಚನೆಯ ಮೇರೆಗೆ ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರಮುಖ ಉಪಕರಣಗಳು ಹಾಗೂ ವ್ಯವಸ್ಥೆಗಳ ಕಾರ್ಯಾಚರಣಾ ಸನ್ನದ್ಧತೆಯನ್ನು (Operational Readiness) ಖಚಿತಪಡಿಸಿಕೊಳ್ಳಲು ಪ್ರಿಸಿಸನ್ ಅಪ್ರೋಚ್ ಲೈಟಿಂಗ್ ಕ್ಯಾಟಗರಿ 1 (CAT-1) ವ್ಯವಸ್ಥೆ ಹಾಗೂ ರನ್‌ವೇ ಬದಿಯ ರಸ್ತೆಗಳು ಸೇರಿದಂತೆ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ದೃಶ್ಯ ತಪಾಸಣೆ (Visual Inspection) ನಡೆಸಿದೆ ಎಂದು ಏರ್‌ಪೋರ್ಟ್ ಪಿಆರ್‌ಒ ತಿಳಿಸಿದ್ದಾರೆ.

ಜೋಕಟ್ಟೆಯಲ್ಲಿ ನಡುಗಿದ ಮನೆ, ಶಾಲೆ: ರಸ್ತೆಗಿಳಿದು ಜನರ ಪ್ರತಿಭಟನೆ: ಸ್ಫೋಟದ ತೀವ್ರತೆಗೆ ಎಂಆರ್‌ಪಿಎಲ್ ಕೂಗಳತೆಯ ದೂರದಲ್ಲಿರುವ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸುತ್ತಮುತ್ತಲಿನ ನೂರಾರು ಮನೆಗಳ ಬಾಗಿಲು-ಕಿಟಕಿ ಗಾಜುಗಳು ಚೂರುಚೂರಾಗಿ ಬಿದ್ದಿವೆ. ಸ್ಫೋಟದ ಸದ್ದು ಹಾಗೂ ಕಂಪನಕ್ಕೆ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಗಾಬರಿಗೊಂಡ ಗ್ರಾಮಸ್ಥರು ಬೀದಿಗಿಳಿದು ಎಂಆರ್‌ಪಿಎಲ್ ಪ್ರವೇಶ ದ್ವಾರದ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಫಯಾಜ್ ಮಾತನಾಡಿ "ಮಧ್ಯಾಹ್ನ ಸುಮಾರು 12:30ಕ್ಕೆ ಭೂಕಂಪವಾದಂತೆ ಭಾರಿ ಸ್ಫೋಟದ ಸದ್ದು ಕೇಳಿಸಿತು. ಜೋಕಟ್ಟೆಯ ಪಂಚಾಯತ್, ಗ್ರಂಥಾಲಯ, ಶಾಲೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಕಂಪನಿಯವರು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನಿರಂತರ ಮಾಲಿನ್ಯ ಹಾಗೂ ಅಪಾಯದ ನೆರಳಿನಲ್ಲಿ ಬದುಕುತ್ತಿರುವ ಊರಿನ ಜನರಿಗೆ ರಕ್ಷಣೆ ಇಲ್ಲವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಾಂತರಕ್ಕೆ ಆಗ್ರಹಿಸಿದ ಸ್ಥಳೀಯ ಮುಖಂಡರು: ಸ್ಥಳೀಯ ಮುಖಂಡರಾದ ಮುನೀರ್ ಕಾಟಿಪಳ್ಳ, ಪರ್ವೇಜ್ ಅಲಿ ಸೇರಿದಂತೆ ನೂರಾರು ಪ್ರತಿಭಟನಾಕಾರರು ಸ್ಥಳಕ್ಕೆ ಧಾವಿಸಿ ಕಂಪನಿಯ ಬೇಜವಾಬ್ದಾರಿಯನ್ನು ತೀವ್ರವಾಗಿ ಖಂಡಿಸಿದರು. ಜೋಕಟ್ಟೆಯ ನಿವಾಸಿಗಳಿಗೆ ಶಾಶ್ವತ ಪರಿಹಾರ ನೀಡಿ ಸ್ಥಳಾಂತರ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿ ನ್ಯಾಯಕ್ಕೆ ಒತ್ತಾಯಿಸಿದರು.

Ads on article

Advertise in articles 1

advertising articles 2

Advertise under the article