ತೆಲಂಗಾಣ :ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿಯ ಭೀಕರ ಹತ್ಯೆ: ಗರ್ಭಿಣಿ ತಂಗಿಯ ಸಾವಿಗೆ ಸಾರ್ವಜನಿಕ ರಸ್ತೆಯಲ್ಲೇ ಪ್ರತೀಕಾರ ತೀರಿಸಿಕೊಂಡ ಅಣ್ಣ!

ತೆಲಂಗಾಣ :ತನಗೆ ಕಾನೂನು ಮತ್ತು ಸರ್ಕಾರದಿಂದ ನ್ಯಾಯ ಸಿಗಲಿಲ್ಲ ಎಂಬ ಆಕ್ರೋಶದಿಂದ, ತನ್ನ ಗರ್ಭಿಣಿ ತಂಗಿಯನ್ನು ಭೀಕರವಾಗಿ ಕೊಂದ ಹಂತಕನನ್ನು ಅಣ್ಣನೊಬ್ಬ ಸಾರ್ವಜನಿಕ ರಸ್ತೆಯಲ್ಲೇ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದಿದೆ. ನಿಜಾಮಾಬಾದ್‌ನ ರಾಜರಾಜೇಂದ್ರ ಚೌರಸ್ತಾದಲ್ಲಿ ನಡೆದ ಈ ಭೀಕರ ಹತ್ಯೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯೂಟ್ಯೂಬರ್ ವೈಷ್ಣವಿ ಹಾಗೂ ಚಿತ್ತಾರಿ ಹರಿಬಾಬು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ವೈಷ್ಣವಿಯನ್ನು ಹರಿಬಾಬು ಕಳೆದ ಮಾರ್ಚ್‌ನಲ್ಲಿ ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಆತ ಜುಲೈನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದನು. ಇದರಿಂದ ರೊಚ್ಚಿಗೆದ್ದ ವೈಷ್ಣವಿಯ ಸಹೋದರ ಗಂಧಂ ಸಂತೋಷ್, ನಿಜಾಮಾಬಾದ್‌ನ ಮುಖ್ಯರಸ್ತೆಯಲ್ಲಿದ್ದ ಹರಿಬಾಬು ಕುತ್ತಿಗೆ ಹಾಗೂ ತಲೆಗೆ ಚಾಕುವಿನಿಂದ ಇರಿದು ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ.
ಪೋಲಿಸ್ ಠಾಣೆಗೆ ತೆರಳಿ ಶರಣಾದ ಆರೋಪಿ:
ತಂಗಿಯನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಹತ್ಯೆ ಮಾಡಿದ ನಂತರ ಸಂತೋಷ್ ಕೋರುಟ್ಲ ಪೊಲೀಸ್ ಠಾಣೆಗೆ ತೆರಳಿ ನೇರವಾಗಿ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.