ದೆಹಲಿ :ಅಪ್ರಾಪ್ತೆಯ ಮೇಲೆ ಭೀಕರ ದೌರ್ಜನ್ಯ, ಹತ್ಯೆ: ಪೊಲೀಸರ ಕಾರ್ಯಾಚರಣೆ ಹೇಗಿತ್ತು.?
Friday, September 18, 2026
ದೆಹಲಿ: 17 ವರ್ಷದ ಬಾಲಕಿಯೊಬ್ಬಳ ಮೇಲೆ ನಾಲ್ವರು ಅತ್ಯಾಚಾರ ಎಸಗಿ, ಚಾಕುವಿನಿಂದ ಇರಿದು ಕೊಲೆ ಮಾಡಿ, ಮೃತದೇಹವನ್ನು ಬಯಲು ಪ್ರದೇಶದಲ್ಲಿ ಎಸೆದು ಪರಾರಿಯಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪ್ರಮುಖ ಆರೋಪಿ ಹಾಗೂ ಮೂವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಖಡ್ಡಾ ಕಾಲೊನಿ ನಿವಾಸಿ ಶಿವಂ ಅಲಿಯಾಸ್ ಸುಧಾಮ ಪ್ರಮುಖ ಆರೋಪಿಯಾಗಿದ್ದು, ಈತನಿಗೆ ಮೂವರು 16-17 ವರ್ಷದ ಬಾಲಕರು ಸಾಥ್ ನೀಡಿದ್ದರು. ಪರಿಚಿತರಾಗಿದ್ದ ಬಾಲಕಿಯೊಂದಿಗೆ ಟೆಂಪೋದಲ್ಲಿ ತೆರಳಿ ಮದ್ಯಪಾನ ಮಾಡಿದ ಆರೋಪಿಗಳು, ಬಳಿಕ ಈ ಕೃತ್ಯ ಎಸಗಿದ್ದಾರೆ. ಸೆಪ್ಟೆಂಬರ್ 13ರಂದು ಕುಶಕ್ ರಸ್ತೆಯ ಜಮೀನೊಂದರ ಸಮೀಪ ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಯಾವುದೇ ಸಾಕ್ಷ್ಯಗಳಿಲ್ಲದ ಕಾರಣ ಪೊಲೀಸರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ತನಿಖೆ ನಡೆಸಿ, ಶಂಕಿತ ಟೆಂಪೋವನ್ನು ಪತ್ತೆಹಚ್ಚುವ ಮೂಲಕ ಆರೋಪಿಗಳ ಜಾಡು ಹಿಡಿದಿದ್ದಾರೆ. ಸದ್ಯ ಬಿಎನ್‌ಎಸ್ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.