ಮೈಸೂರು :ಹಳ್ಳಿಯ ಮನೆಬಾಗಿಲಿಗೆ ತಲುಪಲಿದೆ ಸರ್ಕಾರಿ ಸೇವೆ: ಶಿಕ್ಷಕರಿಗೆ ‘Tr’ ಗೌರವ ಮತ್ತು ಶೇ.7ರಷ್ಟು ಆಂತರಿಕ ಮೀಸಲಾತಿ ಘೋಷಣೆ!

ವಿಜಯನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ನೂತನ ಅಭಿಯಾನಕ್ಕೆ ಕೂಡ್ಲಗಿಯಲ್ಲಿ ಚಾಲನೆ ದೊರೆತಿದ್ದು, ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರ ಗೌರವಾರ್ಥವಾಗಿ ಇನ್ನುಮುಂದೆ ವೈದ್ಯರಂತೆಯೇ (‘Dr’) ಶಿಕ್ಷಕರ ಹೆಸರಿನ ಮೊದಲೂ ‘Tr’ (Teacher) ಎಂಬ ಗೌರವಪೂರ್ವಕ ಪದನಾಮ ಬಳಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 7ರಷ್ಟು ಆಂತರಿಕ ಮೀಸಲಾತಿ ಕಲ್ಪಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
’ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಗಿರುವ ಈ ಯೋಜನೆಯಡಿ, ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಾಲೂಕು, ಹೋಬಳಿ ಮತ್ತು ಪಂಚಾಯಿತಿ ಮಟ್ಟಕ್ಕೆ ಖುದ್ದು ತೆರಳಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ. ಕಂದಾಯ ಹಾಗೂ ಭೂಮಿ ವ್ಯಾಜ್ಯಗಳಲ್ಲಿ ಸಿಲುಕಿರುವ ಬಡ ನಾಗರಿಕರಿಗೆ ಕಾನೂನು ಹೋರಾಟ ನಡೆಸಲು ಸರ್ಕಾರದ ವತಿಯಿಂದಲೇ ಉಚಿತ ವಕೀಲರ ನೆರವು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.