ಗಂಗಾವತಿ : ಮನೆಯ ಬೆಡ್‌ರೂಂನಲ್ಲೇ 50 ಅಡಿ ಆಳದ ಗುಂಡಿ: ನಿಧಿಯ ಆಸೆಗೆ ಬಿದ್ದು ಬಿಹಾರದಿಂದ ಕಾರ್ಮಿಕರನ್ನು ಕರೆಸಿ ಅಗೆಸಿದ ದಂಪತಿ!

ಗಂಗಾವತಿ: ನಿಧಿ ಸಿಗುತ್ತದೆ ಎಂಬ ಆಸೆಯಿಂದ ಸ್ವಂತ ಮನೆಯ ಬೆಡ್‌ರೂಂನಲ್ಲೇ ಬರೋಬ್ಬರಿ 50 ಅಡಿ ಆಳದ ಗುಂಡಿ ತೋಡಿದ ವಿಚಿತ್ರ ಪ್ರಕರಣ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಮತ್ತು ಅವರ ಪತ್ನಿ ನಾಗಬಿಂದು ಸೇರಿದಂತೆ ಒಟ್ಟು 8 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ರಹಸ್ಯವಾಗಿ ಈ ನಿಧಿ ಶೋಧನೆ ನಡೆಸಲಾಗಿತ್ತು. ದಂಪತಿಯು ತಮ್ಮ ಮನೆ ಖಾಲಿ ಮಾಡಿ ಬೆಂಗಳೂರಿಗೆ ತೆರಳಿದ್ದು, ನಿಧಿಯ ಆಸೆ ತೋರಿಸಿ ಬಿಹಾರ ಮೂಲದ ಆರು ಮಂದಿ ಕಾರ್ಮಿಕರನ್ನು ಗುಂಡಿ ತೋಡಲು ನಿಯೋಜಿಸಿದ್ದರು ಎನ್ನಲಾಗಿದೆ. ಯಾರಿಗೂ ಅನುಮಾನ ಬಾರದಂತೆ ರಾತ್ರಿ ವೇಳೆ ಶಬ್ದ ಮಾಡದೆ ಗುಂಡಿ ತೋಡುತ್ತಿದ್ದ ಕಾರ್ಮಿಕರು, ಅಗೆದ ಮಣ್ಣನ್ನು ಹೊರಗೆ ಹಾಕದೆ ಮನೆಯೊಳಗೇ 25ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿಟ್ಟಿದ್ದರು. ಗುಂಡಿ ಅಗೆಯುವಾಗ ನೀರು ಬಂದರೂ ಬಕೆಟ್‌ಗಳ ಮೂಲಕ ಹೊರಗೆ ಚೆಲ್ಲಿ ಕೆಲಸ ಮುಂದುವರಿಸಿದ್ದರು.
ಸ್ಥಳೀಯ ನಿವಾಸಿ ಅರುಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ, ಬಿಹಾರ ಮೂಲದ ಸಂತೋಷ ಬಸವನ್, ಮಿಥುನ್ ಕುಮಾರ್, ಅಭಿಷೇಕ್ ಪವನ್, ಮಂಜೇಶ್ ಪಾಸ್ವಾನ್, ಬಿಹಕಾಶ್ ಕುಮಾರ್ ಪವನ್ ಮತ್ತು ಶಂಕರ ಪವನ್ ಎಂಬ ಆರು ಮಂದಿ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಗಳಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ಪ್ರಸ್ತುತ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.