ಬೆಂಗಳೂರು :ಸೈಬರ್ ಅಪರಾಧಿಗಳ ಸೈಲೆಂಟ್ ಅಟ್ಯಾಕ್: ಮೂರು ವರ್ಷಗಳಲ್ಲಿ ಬೆಂಗಳೂರಲ್ಲಿ ಖದೀಮರ ಪಾಲಾಗಿದ್ದು 306 ಕೋಟಿ!
ಡಿಜಿಟಲ್ ಅರೆಸ್ಟ್ ಜಾಲದ ಆಳ ಅಗಲವನ್ನ ಗಮನಿಸಿದರೆ, ಈ ವಂಚನೆಯು ವರ್ಷದಿಂದ ವರ್ಷಕ್ಕೆ ಅತ್ಯಂತ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ.
ಬೆಂಗಳೂರು ಪೊಲೀಸ್ ಇಲಾಖೆಯಲ್ಲಿನ ಅಂಕಿ ಅಂಶಗಳ ಪ್ರಕಾರ 2024ರಲ್ಲಿ ದಾಖಲಾದ 936 ಪ್ರಕರಣಗಳಲ್ಲಿ 132 ಕೋಟಿ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ. 2025ರಲ್ಲಿ ಪ್ರಕರಣಗಳ ಸಂಖ್ಯೆ 217ಕ್ಕೆ ಇಳಿದಿದ್ದರೂ ಸಹ ವಂಚನೆಯ ಮೊತ್ತ 111 ಕೋಟಿ ರೂಪಾಯಿ ತಲುಪಿತ್ತು. ಇನ್ನು 2026ರ ಸೆಪ್ಟೆಂಬರ್ 30ರವರೆಗೂ ಕೇವಲ 69 ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 61 ಕೋಟಿ ರೂಪಾಯಿ ವಂಚಕರ ಖಾತೆಗಳನ್ನ ಸೇರಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಸಹ ಕಳೆದುಕೊಳ್ಳುತ್ತಿರುವ ಹಣದ ಗಾತ್ರ ಹೆಚ್ಚುತ್ತಲೇ ಸಾಗಿದೆ.

ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳೇನು?: ಡಿಜಿಟಲ್ ಅರೆಸ್ಟ್ ಎಂಬ ಕರಾಳ ಸೈಬರ್ ಕೃತ್ಯದ ವಿರುದ್ಧ ಸಮರ ಸಾರಿರುವ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು, ವಂಚಕರ ಜಾಲವನ್ನು ಭೇದಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 2024ರಿಂದ ಈವರೆಗೆ ಒಟ್ಟು 1,222 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 58 ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದುಕೊಂಡ ಹಣದ ಪೈಕಿ ಪೊಲೀಸರು ತ್ವರಿತವಾಗಿ ಸ್ಪಂದಿಸಿ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 97.75 ಕೋಟಿ ರೂಪಾಯಿಗಳನ್ನ ಫ್ರೀಜ್ ಮಾಡಿಸಿದ್ದಾರೆ. ಇದರಲ್ಲಿ 21.33 ಕೋಟಿ ರೂಪಾಯಿ ಹಣವನ್ನ ಯಶಸ್ವಿಯಾಗಿ ರಿಕವರಿ ಮಾಡಲಾಗಿದ್ದು, ವಂಚನೆಗೆ ಒಳಗಾದ ಸಂತ್ರಸ್ತರಿಗೆ ಈಗಾಗಲೇ 12.44 ಕೋಟಿ ರೂಪಾಯಿಗಳನ್ನು ಮರಳಿ ಹಸ್ತಾಂತರಿಸಲಾಗಿದೆ.
ವಿಪರ್ಯಾಸವೆಂದರೆ ಡಿಜಿಟಲ್ ಅರೆಸ್ಟ್ ಜಾಲಕ್ಕೆ ವಿದ್ಯಾವಂತರೆ ಹೆಚ್ಚು ಬಲಿಯಾಗುತ್ತಿದ್ದಾರೆ. ಬೆಂಗಳೂರಿನ ವಿದ್ಯಾವಂತರು, ಟೆಕ್ಕಿಗಳು ಹಾಗೂ ನಿವೃತ್ತ ಹಿರಿಯ ನಾಗರಿಕರು ಈ ಜಾಲದ ಮುಖ್ಯ ಟಾರ್ಗೆಟ್ ಆಗುತ್ತಿದ್ದಾರೆ. ಸೈಬರ್ ವಂಚಕರು ವಾಟ್ಸ್ಯಾಪ್, ಟೆಲಿಗ್ರಾಂ ಮತ್ತಿತರ ಮಾಧ್ಯಮಗಳ ಮೂಲಕ ವಿಡಿಯೋ ಕರೆಗಳನ್ನ ಮಾಡಿ ತಮ್ಮ ಸಂಚು ರೂಪಿಸುತ್ತಾರೆ.
ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ಸಮವಸ್ತ್ರ ಧರಿಸಿ ಕರೆ ಮಾಡುವ ವಂಚಕರು, ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸಲ್ ಬಂದಿದೆ ಅಥವಾ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಬೆದರಿಸುತ್ತಾರೆ. ಗಂಟೆಗಳ ಕಾಲ ವಿಡಿಯೋ ಕರೆಯಲ್ಲಿಯೇ ಇರಿಸಿ, ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿ, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಬಣ್ಣ ಬಣ್ಣದ ಆಫರ್ ಮತ್ತು ಆಮಿಷಗಳೂ ಈ ಖೆಡ್ಡಾದ ಭಾಗವಾಗಿರಬಹುದು. ಆದರೆ ಯಾವುದೇ ತನಿಖಾ ಸಂಸ್ಥೆಯ ಅಧಿಕಾರಿಗಳು ಹಣಕ್ಕೆ ಡಿಮ್ಯಾಂಡ್ ಮಾಡುವಂತಿಲ್ಲ. ಮುಖ್ಯವಾಗಿ ಡಿಜಿಟಲ್ ಅರೆಸ್ಟ್ ಎಂಬ ವಿಧಾನವನ್ನ ಯಾವುದೇ ತನಿಖಾ ಸಂಸ್ಥೆಯೂ ಅನುಸರಿಸುವುದಿಲ್ಲ ಎಂಬುದನ್ನ ಸಾರ್ವಜನಿಕರು ಅರಿತಿರಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.
ಡಿಜಿಟಲ್ ಅರೆಸ್ಟ್ ಪ್ರಕರಣಗಳ ಭೀತಿಯ ನಡುವೆ ಈ ವರ್ಷದಲ್ಲಿ ದಾಖಲಾದ ಪ್ರಕರಣಗಳನ್ನ ಗಮನಿಸಿದಾಗ ಆಶಾದಾಯಕ ಎನ್ನಬಹುದಾಗಿದೆ. ಬೆಂಗಳೂರು ಪೊಲೀಸರು ನಿರಂತರವಾಗಿ ನಡೆಸುತ್ತಿರುವ ಜಾಗೃತಿ ಅಭಿಯಾನಗಳು, ಸಂದೇಶಗಳು ಹಾಗೂ ಕಠಿಣ ಕ್ರಮಗಳ ಫಲವಾಗಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಹಾಗೂ ಕಳೆದುಕೊಂಡ ಹಣದ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡುಬಂದಿದೆ. ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಪೊಲೀಸರು ವಿಡಿಯೋ ಕರೆ ಮೂಲಕ 'ಡಿಜಿಟಲ್ ಅರೆಸ್ಟ್' ಮಾಡುವುದಿಲ್ಲ ಎಂಬ ಕನಿಷ್ಠ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಿದರೆ ಮಾತ್ರ ಈ ತರಹದ ಬೃಹತ್ ಸೈಬರ್ ಲೂಟಿಗೆ ಸಂಪೂರ್ಣ ತಡೆ ಹಾಕಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.