ಬೆಂಗಳೂರು :5 ಕೆಜಿ ಚಿನ್ನ ಕೊಡುವುದಾಗಿ ಅಕ್ಕಸಾಲಿಗನಿಗೆ 1.3 ಕೋಟಿ ರೂ. ದೋಖಾ ಆರೋಪ: ದೂರು ದಾಖಲು..

ಬೆಂಗಳೂರು :5 ಕೆಜಿ ಚಿನ್ನ ಕೊಡುವುದಾಗಿ ಅಕ್ಕಸಾಲಿಗನಿಗೆ 1.3 ಕೋಟಿ ರೂ. ದೋಖಾ ಆರೋಪ: ದೂರು ದಾಖಲು..

File Photo

ಬೆಂಗಳೂರು: ದೈವಿಕ ಕೃಪೆಯಿಂದ ಸಿಕ್ಕಿದ್ದ ಚಿನ್ನಾಭರಣ ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಗೆ 1.3 ಕೋಟಿ ರೂಪಾಯಿ ವಂಚಿಸಿರುವ ತೆಲಂಗಾಣ ಮೂಲದ ಆರೋಪಿ ವಿರುದ್ಧ ಸಿಟಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ವರಾಜ್ ಆಚಾರಿ ಅವರ ಸೊಸೆಗೆ ಅಸ್ತಮಾ ಕಾಯಿಲೆ ಇತ್ತು. ಇದಕ್ಕೆ ಆರೋಪಿ ಭೂತಂ ಲಿಂಗಯ್ಯ ಔಷಧ ನೀಡುತ್ತಿದ್ದ. ನಂತರ ಸೆಲ್ವರಾಜ್ ಅವರಿಗೆ ಮಂಡಿನೋವಿಗೂ ಔಷಧ ನೀಡಿದ್ದ. ಸೆಲ್ವರಾಜ್ ಕುಟುಂಬಸ್ಥರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ. ಅಕ್ಕಸಾಲಿಗನಾಗಿದ್ದ ಸೆಲ್ವರಾಜ್‌ ಹಿನ್ನೆಲೆ ತಿಳಿದುಕೊಂಡಿದ್ದ ಆರೋಪಿ ಭೂತಂ ಲಿಂಗಯ್ಯ, ಆತನಿಂದ ಹಣ ಲಪಟಾಯಿಸುವ ಉದ್ದೇಶದಿಂದ ತನ್ನ ಬಳಿ, ದೇವಿಯ ಕೃಪೆಯಿಂದ ದೊರೆತ 5 ಕೆಜಿ ಚಿನ್ನವಿದೆ ಎಂದು ನಂಬಿಸಿದ್ದ. ನೀನು ದೊಡ್ಡ ಚಿನ್ನದ ಅಂಗಡಿ ಇಡಬೇಕು ಎಂದು ಆಸೆ ಹುಟ್ಟಿಸಿದ್ದ. ಅಷ್ಟೇ ಅಲ್ಲದೇ, ನನ್ನ ಬಳಿ ಇರುವ 5 ಕೆಜಿ ಚಿನ್ನವನ್ನು ಖರೀದಿಸಿದರೆ ಐಶ್ವರ್ಯ ಹೆಚ್ಚಾಗುತ್ತದೆ. ವ್ಯಾಪಾರವೂ ವೃದ್ಧಿಯಾಗುತ್ತದೆ ಎಂದು ನಂಬಿಸಿದ್ದ. ಕಳೆದ ಒಂದೂವರೆ ವರ್ಷದ ಹಿಂದೆ ಪರೀಕ್ಷೆಗಾಗಿ ಅಸಲಿ ಚಿನ್ನದ ಚಿಕ್ಕ ನಾಣ್ಯದ ಮಾದರಿಯೊಂದನ್ನು ಸೆಲ್ವರಾಜ್‌ಗೆ ನೀಡಿದ್ದ. ಅದನ್ನು ಪರಿಶೀಲಿಸಿದಾಗ, ಅಸಲಿ ಚಿನ್ನ ಎಂಬುದು ಕಂಡು ಬಂದಿತ್ತು. ಹೀಗಾಗಿ ಸೆಲ್ವರಾಜ್ ಆರೋಪಿಯ ಮಾತನ್ನು ನಂಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

1.3 ಕೋಟಿ ರೂ. ವಂಚನೆ: ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನೀನು ಸಾಯುತ್ತಿಯಾ ಎಂದು ಭೂತಂ ಲಿಂಗಯ್ಯ ಹೆದರಿಸಿದ್ದ. ಸಾಲದ್ದಕ್ಕೆ, ಚಿನ್ನವನ್ನು ದೇವರ ಮುಂದೆ ಇಟ್ಟು ಈ ವಿಚಾರ ಯಾರ ಬಳಿಯೂ ಹೇಳುವುದಿಲ್ಲ ಎಂದು ಸೆಲ್ವರಾಜ್‌ನಿಂದ ಪ್ರಮಾಣ ಮಾಡಿಸಿದ್ದ. ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ ಸೆಲ್ವರಾಜ್ ಅವರಿಂದ ಹಂತ ಹಂತವಾಗಿ 1.3 ಕೋಟಿ ರೂ. ಪಡೆದಿದ್ದ. ಇತ್ತ ಹಣ ಹೊಂದಿಸಲು ಸೆಲ್ವರಾಜ್ ತಮ್ಮ ಜಮೀನು ಹಾಗೂ ಕುಟುಂಬದವರ ಚಿನ್ನಾಭರಣ ಮಾರಾಟ ಮಾಡಿದ್ದರು. ನಂತರ ಚಿನ್ನ ಕೊಡದೇ ಇದ್ದಾಗ, ಆರೋಪಿಯ ಬಗ್ಗೆ ಅನುಮಾನ ಬಂದು ಆತನಿಗೆ ಕರೆ ಮಾಡಿದಾಗ, ತನ್ನ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಊರಿಗೆ ತೆರಳಿರುವುದಾಗಿ ಭೂತಂ ಲಿಂಗಯ್ಯ ಹೇಳಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಾದ ನಂತರ ಬೆಂಗಳೂರಿಗೆ ಹಿಂದಿರುಗದೇ, ತನ್ನ ಮೊಬೈಲ್ ಅನ್ನೂ ಸ್ವಿಚ್ ಆಫ್ ಮಾಡಿಕೊಂಡ ಆರೋಪಿ ಭೂತಂ ಲಿಂಗಯ್ಯ ಪರಾರಿಯಾಗಿದ್ದಾನೆ. ವಂಚನೆಗೊಳಗಾದ ಸೆಲ್ವರಾಜ್ ಹಣ ಕೊಡಿಸುವಂತೆ ಸಿಟಿ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.


Ads on article

Advertise in articles 1

advertising articles 2

Advertise under the article