ನವದೆಹಲಿ :ಇಂದು ಸಿಜೆಪಿ ಪ್ರತಿಭಟನೆ: ದೆಹಲಿಯಾದ್ಯಂತ ಪೊಲೀಸ್ ಸರ್ಪಗಾವಲು, 45 ಮೆಟ್ರೋ ನಿಲ್ದಾಣ ಬಂದ್.
ಭದ್ರತೆಗೆ ಸಿಎಪಿಎಫ್ನ 120 ಪಡೆ: ಭದ್ರತೆಯಲ್ಲಿ ಸಮಸ್ಯೆಯಾಗದಂತೆ ದೆಹಲಿ ಪೊಲೀಸರಿಗೆ ಸಹಾಯಕವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 120ಕ್ಕೂ ಹೆಚ್ಚು ದಳಗಳನ್ನು ನಿಯೋಜಿಸಲಾಗಿದೆ. ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಂಟಿ ಆಯುಕ್ತರು, ಉಪ ಆಯುಕ್ತರು ಮತ್ತು ಹೆಚ್ಚುವರಿ ಉಪ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಕಟವಾಗಿ ಮೇಲ್ವಿಚಾರಣೆ ನಡೆಸಲು ಅನುಕೂಲವಾಗುವಂತೆ ನವದೆಹಲಿ ಜಿಲ್ಲೆಯನ್ನು 20 ವಲಯಗಳಾಗಿ ವಿಂಗಡಿಸಲಾಗಿದೆ. ವಿವಿಧ ವಿಭಾಗಗಳ ನೇತೃತ್ವವನ್ನು ವಿಶೇಷ ಆಯುಕ್ತರಿಗೆ ನೀಡಲಾಗಿದೆ.
ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದೇಕೆ? ಇಂದಿನ ಪ್ರತಿಭಟನೆಗೆ ಸಿಜೆಪಿಗೆ ಅಧಿಕೃತ ಅನುಮತಿ ನಿರಾಕರಿಸಲಾಗಿದೆ. ಕಾರಣ, ಅಕ್ಟೋಬರ್ 10 ರ ಪ್ರತಿಭಟನೆಗೆ ಅನುಮತಿ ಕೋರಿ ಅಕ್ಟೋಬರ್ 7ರಂದು ಮನವಿ ಸಲ್ಲಿಸಲಾಗಿದೆ. ಅಂದರೆ ಉದ್ದೇಶಿತ ಪ್ರತಿಭಟನೆಗೆ ಕೇವಲ ಮೂರು ದಿನಗಳ ಮೊದಲು ಈ ಮನವಿ ಸಲ್ಲಿಸಲಾಗಿದೆ. ಆದರೆ ನಿಯಮಗಳ ಪ್ರಕಾರ, ಕನಿಷ್ಠ 10 ದಿನಗಳ ಮುಂಚಿತವಾಗಿ ಮನವಿ ಸಲ್ಲಿಸಬೇಕು ಎಂದು ಜಂಟಿ ಪೊಲೀಸ್ ಆಯುಕ್ತ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
ಸಿಜೆಪಿ ಪ್ರತಿಭಟನೆ ಮಾಡುವುದಾಗಿ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಹಿಂದೆ ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಿರಲಿಲ್ಲ. ಭದ್ರತೆಗೆ ಧಕ್ಕೆ ಬರುವ ಆತಂಕದ ಹಿನ್ನೆಲೆಯಲ್ಲಿ ಪೊಲೀಸರು ಇಂದಿನ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ.
ಮೆಟ್ರೋ ನಿಲ್ದಾಣ, ರೈಲುಗಳು ಬಂದ್: ಮಹತ್ವದ ಕ್ರಮದಲ್ಲಿ ಶುಕ್ರವಾರ ರಾತ್ರಿಯಿಂದಲೇ ದೆಹಲಿ ಮೆಟ್ರೋದ 45 ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ನವದೆಹಲಿ, ಪಟೇಲ್ ಚೌಕ್, ಮಂಡಿ ಹೌಸ್, ಜನಪಥ್, ಸುಪ್ರೀಂ ಕೋರ್ಟ್, ಐಟಿಒ, ಕಾಶ್ಮೀರಿ ಗೇಟ್ ಹಾಗೂ ದಕ್ಷಿಣ ಮತ್ತು ಈಶಾನ್ಯ ದೆಹಲಿಯ ಹಲವು ನಿಲ್ದಾಣಗಳು ಇದರಲ್ಲಿವೆ.
ಇದರ ಜೊತೆಗೆ, ಕೆಲ ರೈಲುಗಳನ್ನೂ ಬಂದ್ ಮಾಡಲಾಗಿದೆ. ಆದರೆ, ಸಾಮಾನ್ಯ ಜನರ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಅಧಿಕೃತ ಟಿಕೆಟ್ ಇದ್ದವರು ರೈಲುಗಳಲ್ಲಿ ಸಂಚಾರ ನಡೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೆಟ್ ಕ್ರಿಯೇಟರ್ಗಳ ಮೇಲೆ ನಿಗಾ: ನೀಟ್ ಪ್ರತಿಭಟನೆಯಲ್ಲಿ ಜನರನ್ನು ಭಾಗವಹಿಸಲು ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ಈಗ ಎಲ್ಲ ಸಾಮಾಜಿಕ ಮಾಧ್ಯಮಗಳು ಮತ್ತು 200ಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್ಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಜಂತರ್ ಮಂತರ್, ಸಂಸತ್ತು ಸೇರಿದಂತೆ 4 ಕಿಮೀ ವ್ಯಾಪ್ತಿಯಲ್ಲಿ ಇಂಟರ್ ನೆಟ್ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರದಂದು ದೆಹಲಿಯಾದ್ಯಂತ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ.