ಮಂಗಳೂರು : ಬಸ್ ಡಿಕ್ಕಿಯಾಗಿ ಯುವಕ ದೂರಕ್ಕೆಸೆಯಲ್ಪಟ್ಟರೂ ಚಾಲಕನ ನಿರ್ಲಕ್ಷ್ಯ; ಎರಡೂವರೆ ಗಂಟೆ ರಸ್ತೆಯಲ್ಲೇ ಉಳಿದ ಶವ ! ಜಪ್ಪಿನಮೊಗರು ಟ್ರಾಫಿಕ್ ಠಾಣೆ ಬಳಿಯಲ್ಲೇ ಘಟನೆ, ಅಪರಿಚಿತನೆಂದು ಪ್ರಕಟಣೆಯಲ್ಲಿ ಮುಗಿಸಿದ ಪೊಲೀಸರು !
Monday, October 26, 2026
ಜಪ್ಪಿನಮೊಗರಿನಲ್ಲಿ ಹೆದ್ದಾರಿ ಬದಿ ನಡೆದು ಹೋಗುತ್ತಿದ್ದ ಯುವಕನಿಗೆ ಖಾಸಗಿ ಬನ್ನೊಂದು ಡಿಕ್ಕಿಯಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜಪ್ಪಿನಮೊಗರು ಟ್ರಾಫಿಕ್ ಠಾಣೆಯ ಬಳಿಯಲ್ಲೇ ಘಟನೆ ನಡೆದಿದ್ದರೂ, ಯುವಕನ ಮೃತದೇಹ ರಸ್ತೆ ಬದಿಯಲ್ಲೇ ರಾತ್ರಿ ವರೆಗೂ ಉಳಿದುಕೊಂಡಿತ್ತು ಎನ್ನುವ ವಿಚಾರ ತಡವಾಗಿ ತಿಳಿದುಬಂದಿದೆ.
ಅ.22ರಂದು ರಾತ್ರಿ 7.50ಕ್ಕೆ ಘಟನೆ ನಡೆದಿದ್ದು, 42 ನಂಬರಿನ ಕಟೀಲೇಶ್ವರಿ ಎಂಬ ಖಾಸಗಿ ಬಸ್ ತಲಪಾಡಿ ಕಡೆಗೆ ಹೋಗುತ್ತಿದ್ದಾಗ ರಸ್ತೆ ಬದಿಯಿದ್ದ ಯುವಕನಿಗೆ ಡಿಕ್ಕಿ ಹೊಡೆದರೂ ಅಲ್ಲಿ ನಿಲ್ಲಿಸದೆ ಸ್ಥಳದಿಂದ ನೇರವಾಗಿ ಮುಂದಕ್ಕೆ ಹೋಗಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ ವಹಿಸಿದ್ದಾನೆಂಬ ವಿಚಾರವೂ ತಿಳಿದುಬಂದಿದೆ.
ಘಟನೆ ಬಗ್ಗೆ ಟ್ರಾಫಿಕ್ ಠಾಣೆಯವರು ಎರಡು ದಿನ ಕಳೆದ ಬಳಿಕ ಅಪರಿಚಿತ ಶವದ ಬಗ್ಗೆ ಪ್ರಕಟಣೆ ನೀಡಿದ್ದು, ವ್ಯಕ್ತಿಯು ತಲಪಾತಿ ವಿಜಯ್ ಜನನಾಯಗನ್ ಎಂದು ಬರೆದಿರುವ ಟೀ ಶರ್ಟ್ ಧರಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 30-35 ವರ್ಷದ ವ್ಯಕ್ತಿಯೆಂದು ತಿಳಿಸಿದ್ದು ಎರಡೂ ಕೈಗಳಲ್ಲಿ ತ್ರಿಶೂಲ ರೀತಿಯ ಟ್ಯಾಟೂ ಹಾಕಿದ್ದಾನೆ. ಕೈಗೆ ಕೆಂಪು, ಹಳದಿ ಬಣ್ಣದ ನೂಲು ಕಟ್ಟಿದ್ದಾನೆ. ತಡರಾತ್ರಿ ವೆನ್ಹಾಕ್ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದು ಈತನ ಬಗ್ಗೆ ತಿಳಿದವರಿದ್ದರೆ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಆದರೆ ಜೊತೆಗೆ ನೀಡಿರುವ ಫೋಟೋದಲ್ಲೇ ಲೊಕೇಶನ್ ಟೈಮ್ ನಮೂದಾಗಿದ್ದು ಅ.22ರಂದು ರಾತ್ರಿ 10.30ಕ್ಕೆ ಮಣ್ಣಿನ ರಸ್ತೆಯಲ್ಲಿ ಬಿದ್ದುಕೊಂಡಿರುವ ಶವದ ಚಿತ್ರ ಇದೆ. ಅಂದರೆ 7.50ಕ್ಕೆ ಬಸ್ ಡಿಕ್ಕಿಯಾಗಿದ್ದರೂ ರಾತ್ರಿ 10.30ರ ವರೆಗೂ ಶವ ಎತ್ತುವುದಕ್ಕೂ ಯಾರೂ ಹೋಗಿಲ್ಲ ಅನ್ನುವುದನ್ನು ಈ ಫೋಟೊ ತಿಳಿಸುತ್ತದೆ. ಜನರು ಸಂಚರಿಸುವ ಮತ್ತು ಟ್ರಾಫಿಕ್ ಠಾಣೆ ಬಳಿಯಲ್ಲೇ ಘಟನೆ ನಡೆದಿದ್ದರೂ, ಶವ ಎತ್ತದೆ ಬಸ್ಸಿನವರು ನಿರ್ಲಕ್ಷ್ಯ ವಹಿಸಿದ್ದು ಕಾಣುತ್ತದೆ.
ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸರ ಸೂಚನೆಯಂತೆ, ಸದ್ರಿ ಬಸ್ಸನ್ನು ಭಾನುವಾರ ಅ.25ರಂದು ಜಪ್ತಿ ಮಾಡಿ ಠಾಣೆಯಲ್ಲಿ ತಂದಿರಿಸಲಾಗಿದೆ. ಆದರೆ ಬಸ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲಿಸಿಲ್ಲ. ಕೇವಲ ಅಪಘಾತವೆಂದು ಕೇಸು ದಾಖಲಿಸಿದ್ದಾರೆ. ಮೃತಪಟ್ಟಿರುವ ಯುವಕ ತಮಿಳುನಾಡು ಮೂಲದವನಾಗಿದ್ದು ಮಂಗಳೂರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಜೊತೆಗಿದ್ದವರೂ ಸಾವನ್ನಪ್ಪಿದ ವ್ಯಕ್ತಿಯ ಪರವಾಗಿ ಠಾಣೆಗೆ ಹಾಜರಾಗಿಲ್ಲ. ಪೊಲೀಸರು ಅಪರಿಚಿತ ಶವದ ಪ್ರಕಟಣೆಗೆ ಸೀಮಿತಗೊಳಿಸಿ ಕೈತೊಳೆದುಕೊಂಡಿದ್ದಾರೆ.