ಬೆಂಗಳೂರು :ಸೌಜನ್ಯ ಪ್ರಕರಣದ ಎಸ್‌ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್ಟು ; ಚೇತನ್ ಸಿಂಗ್ ರಾಥೋಡ್ ಹೆಸರು ಚರ್ಚೆಯಲ್ಲಿ!
Monday, October 26, 2026
ಪ್ರಕರಣದ ಮರು ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರನ್ನು ಬದಲಾಯಿಸಬೇಕೆಂಬ ಆಗ್ರಹ ತೀವ್ರಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ಹಿಂದೆ ಕರ್ತವ್ಯ ನಿರ್ವಹಿಸಿರುವುದನ್ನು ಉಲ್ಲೇಖಿಸಿ, ತನಿಖೆಯ ನಿಷ್ಪಕ್ಷಪಾತತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸೌಜನ್ಯಾ ಪರ ಹೋರಾಟಗಾರರು ಮುಖ್ಯಸ್ಥರ ಬದಲಾವಣೆಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿರುವ ಹೋರಾಟಗಾರರ ತಂಡವು, ಅದಕ್ಕು ಮುನ್ನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿದೆ. ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸಿ, ಪ್ರಕರಣದ ತನಿಖೆಯನ್ನು ಬೇರೆ ಅಧಿಕಾರಿಗೆ ವಹಿಸಬೇಕೆಂದು ಮನವಿ ಮಾಡುವ ಉದ್ದೇಶ ಹೊಂದಿದೆ.
ಈ ನಡುವೆ, ಶಶಿಕುಮಾರ್ ಅವರ ಬದಲಿಗೆ ಹಿರಿಯ ಪೊಲೀಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆ ಬಗ್ಗೆ ಚರ್ಚೆ ಕೇಳಿಬಂದಿದೆ. ಹಿಂದೆ ಶಶಿಕುಮಾರ್ ಅವರು ಮಂಗಳೂರಿನಲ್ಲಿ ಕಮಿಷನರ್ ಆಗಿ ಸೇವೆ ಸಲ್ಲಿಸಿರುವುದು, ಧರ್ಮಸ್ಥಳ ಜೊತೆಗೆ ಸಂಪರ್ಕ ಹೊಂದಿದ್ದ ಫೋಟೊ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ನಿಷ್ಪಕ್ಷಪಾತತೆ ಖಚಿತಪಡಿಸಿಕೊಳ್ಳಲು ಅವರನ್ನು ಬದಲಾಯಿಸಬೇಕು ಎಂಬ ವಾದ ಮುಂದಿಡಲಾಗಿದೆ.
ಪ್ರಕರಣದ ತನಿಖೆ ಮತ್ತು ಅಧಿಕಾರಿಯ ನೇಮಕಾತಿಗೆ ಸಂಬಂಧಿಸಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.