ಮಂಗಳೂರು :ಪ್ರತಿಭಟನೆಗೆ ಮಣಿದ MRPL ಆಡಳಿತ ಮಂಡಳಿ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ..

ಮಂಗಳೂರು :ಪ್ರತಿಭಟನೆಗೆ ಮಣಿದ MRPL ಆಡಳಿತ ಮಂಡಳಿ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ..

mrpl-management-promised-90-lakh-compensation-to-deceased-family-and-10-lakh-in-medical-insurance-for-contract-workers
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಕೋಕರ್ ಹೈಡ್ರೋಟ್ರೀಟರ್ (CHT) ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಬಲಿಯಾದ ಮೂಲ್ಕಿ ಮೂಲದ ಯುವ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಸಾವಿಗೆ ನ್ಯಾಯ ಮತ್ತು ಗರಿಷ್ಠ ಪರಿಹಾರಕ್ಕೆ ಆಗ್ರಹಿಸಿ ಎಂಆರ್‌ಪಿಎಲ್ ಮುಖ್ಯದ್ವಾರದ ಮುಂಭಾಗ ಕಾರ್ಮಿಕ ಸಂಘಟನೆಗಳು ಗುರುವಾರ ಬೆಳಗ್ಗೆಯಿಂದಲೇ ಬೃಹತ್ ಧರಣಿ ಸತ್ಯಾಗ್ರಹ ನಡೆಸಿದವು.

ಎಂಆರ್‌ಪಿಎಲ್-ಒಎನ್‌ಜಿಸಿ ಕರ್ಮಚಾರಿ ಸಂಘ ಹಾಗೂ ಎಂಆರ್‌ಪಿಎಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿ, ಸ್ಥಳಕ್ಕೆ ಎಂಡಿ ಆಗಮಿಸುವಂತೆ ಪಟ್ಟುಹಿಡಿದರು. ಈ ವೇಳೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ಸತತ ಸಂಧಾನ ನಡೆಸಿ, ಯೂನಿಯನ್‌ಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

₹1.20 ಕೋಟಿ ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯ: ಅಗ್ನಿ ಅವಘಡದಲ್ಲಿ ಮೃತಪಟ್ಟ ಗುತ್ತಿಗೆ ನೌಕರ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂ. ಆರ್ಥಿಕ ನೆರವು ಹಾಗೂ ವಿಮಾ ಸೌಲಭ್ಯವನ್ನು ನೀಡುವುದಾಗಿ ಎಂಆರ್‌ಪಿಎಲ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ. ಕಾರ್ಮಿಕ ಸಂಘಟನೆಗಳ ತೀವ್ರ ಪ್ರತಿಭಟನೆ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರ ಸಂಧಾನದ ಬೆನ್ನಲ್ಲೇ ಎಂಆರ್‌ಪಿಎಲ್ ಈ ಅಧಿಕೃತ ಆದೇಶ ಹೊರಡಿಸಿದೆ.

ಮೃತ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ ನೇರವಾಗಿ 90 ಲಕ್ಷ ರೂ. ಆರ್ಥಿಕ ಸಹಾಯಧನ, ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಅಂದಾಜು 10 ಲಕ್ಷ ರೂ. ಹಾಗೂ ಕಾರ್ಮಿಕರ ಪರಿಹಾರ ಪಾಲಿಸಿಯಡಿ ಅಂದಾಜು 20 ಲಕ್ಷ ರೂ. ನೀಡಲಾಗುತ್ತಿದೆ. ಎಲ್ಲ ವಿಮಾ ಸೌಲಭ್ಯ ಹಾಗೂ ಕಂಪನಿಯ ನೆರವು ಸೇರಿ ಮೃತರ ಕುಟುಂಬಕ್ಕೆ ಒಟ್ಟು ಅಂದಾಜು 1.20 ಕೋಟಿ (ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ) ರೂ. ಪರಿಹಾರ ಲಭ್ಯವಾಗಲಿದೆ.


ಗುತ್ತಿಗೆ ಕಾರ್ಮಿಕರಿಗೆ ಮೆಡಿಕ್ಲೈಮ್ ಇನ್ಶೂರೆನ್ಸ್ - 4 ವಾರಗಳಲ್ಲಿ ಅಂತಿಮ: ದ್ವಿತೀಯ ಹಂತದ/ಗುತ್ತಿಗೆ ಕಾರ್ಮಿಕರಿಗೆ ಮೆಡಿಕ್ಲೈಮ್ ವಿಮಾ ಸೌಲಭ್ಯ ಒದಗಿಸುವ ಬೇಡಿಕೆಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಚರ್ಚೆ ನಡೆಯುತ್ತಿದೆ. ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಈ ಕುರಿತು ಸಮಗ್ರ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಸಂಪೂರ್ಣ ಪ್ರಕ್ರಿಯೆಯನ್ನು ಮುಂದಿನ ನಾಲ್ಕು ವಾರಗಳ ಒಳಗಾಗಿ ಪೂರ್ಣಗೊಳಿಸಲು ನಿರೀಕ್ಷಿಸಲಾಗಿದೆ ಎಂದು ಎಂಆರ್‌ಪಿಎಲ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಎಂಆರ್‌ಪಿಎಲ್ ಪ್ರಕಟಣೆಗೂ ಮುನ್ನ, ಆಡಳಿತ ಮಂಡಳಿಯ ಎಂಡಿ ಜೊತೆಗೆ ನೇರವಾಗಿ ಮಾತುಕತೆ ನಡೆಸಿ ಸಂಧಾನ ಸೂತ್ರ ಪ್ರಕಟಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಅವರು, ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದರು. ಸ್ಫೋಟದಲ್ಲಿ ಜೀವ ಕಳೆದುಕೊಂಡ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ 90 ಲಕ್ಷ ರೂ. ನಷ್ಟ ಪರಿಹಾರ ನೀಡಲು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ (MD) ಅಧಿಕೃತವಾಗಿ ಸಮ್ಮತಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದರು.

ಎಂಆರ್‌ಪಿಎಲ್ ಆವರಣದಲ್ಲಿ ಕೆಲಸ ಮಾಡುತ್ತಿರುವ ಕಾಯಂ ಉದ್ಯೋಗಿಗಳಷ್ಟೇ ಅಲ್ಲದೆ, ಅಪಾಯದ ನಡುವೆ ದುಡಿಯುತ್ತಿರುವ ಎಲ್ಲ ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೂ ಅನ್ವಯವಾಗುವಂತೆ ತಲಾ 10 ಲಕ್ಷ ರೂ. ಮೊತ್ತದ ಆರೋಗ್ಯ ವಿಮಾ (Medical/Health Insurance) ಸೌಲಭ್ಯವನ್ನು ಮುಂದಿನ 15 ದಿನಗಳ ಒಳಗಾಗಿ ಜಾರಿಗೆ ತರಲು ಎಂಡಿ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದರು.

ಯೂನಿಯನ್‌ಗಳ ಪ್ರಮುಖ ಎರಡು ಡಿಮ್ಯಾಂಡ್‌ಗಳ ಈಡೇರಿಕೆ: ಧರಣಿ ಸ್ಥಳದಲ್ಲಿದ್ದ ಗೊಂದಲವನ್ನು ಶಮನಗೊಳಿಸಿ ಕಾರ್ಮಿಕರ ಹಿತರಕ್ಷಣೆ ಮಾಡಿರುವ ಕುರಿತು ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ನಾನು ಕಾರ್ಮಿಕರಿಗೆ ನ್ಯಾಯ ಕೊಡಿಸಲು ಮಧ್ಯಸ್ಥಿಕೆ ವಹಿಸಿದೆ. ಎಂಆರ್‌ಪಿಎಲ್ ಎಂಡಿ ಜೊತೆ ಮುಖಾಮುಖಿ ಚರ್ಚೆ ನಡೆಸಿ ಕಾರ್ಮಿಕರ ಪರವಾಗಿ ನಿಂತೆ. ಎಂಆರ್‌ಪಿಎಲ್ ಎಂಡಿ ಅವರು ಮೃತನ ಕುಟುಂಬಕ್ಕೆ 90 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಗುತ್ತಿಗೆ ನೌಕರರೂ ಒಳಗೊಂಡಂತೆ ಎಲ್ಲ ಸಿಬ್ಬಂದಿ ಕುಟುಂಬಗಳಿಗೆ 15 ದಿನಗಳ ಒಳಗಾಗಿ 10 ಲಕ್ಷ ರೂಪಾಯಿ ಮೊತ್ತದ ಮೆಡಿಕಲ್ ಕ್ಲೈಮ್ ಇನ್ಶೂರೆನ್ಸ್ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಕಾರ್ಮಿಕ ಸಂಘಟನೆಗಳ ಈ ಎರಡೂ ಪ್ರಮುಖ ಬೇಡಿಕೆಗಳನ್ನು ಪಾಸ್ ಮಾಡಿಸಲಾಗಿದೆ. ಎಲ್ಲ ಮುಖಂಡರ ಸಮ್ಮುಖದಲ್ಲೇ ಈ ತೀರ್ಮಾನವಾಗಿದ್ದು, ಈ ಎರಡೂ ಬೇಡಿಕೆಗಳ ಒಪ್ಪಿಗೆ ವಿವರವನ್ನು ಅಧಿಕೃತವಾಗಿ ಕಳುಹಿಸಿಕೊಡಲಿದ್ದಾರೆ ಎಂದು ತಿಳಿಸಿದ್ದರು.


Ads on article

Advertise in articles 1

advertising articles 2

Advertise under the article