ಕಾರವಾರ :ದೇವಿಮನೆ ಘಟ್ಟದಲ್ಲಿ ಕಂದಕಕ್ಕೆ ಉರುಳಿದ ಬಸ್: 12 ಮಂದಿಗೆ ಗಾಯ.
ಬಾಗಲಕೋಟೆಯಿಂದ ಶಿರಸಿ ಮಾರ್ಗವಾಗಿ ದೇವಿಮನೆ ಘಟ್ಟದ ಮೂಲಕ ಧರ್ಮಸ್ಥಳದತ್ತ ಬಸ್ ತೆರಳುತ್ತಿತ್ತು. ಮಾಸ್ತಿಹಳ್ಳದ ಸಮೀಪದ ಕಡಿದಾದ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಿಂದ ಕೆಳಕ್ಕೆ ಉರುಳಿ ಕಂದಕಕ್ಕೆ ಬಿದ್ದಿದೆ. ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಖಾದರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕಂದಕಕ್ಕೆ ಬಿದ್ದಿದ್ದ ಬಸ್‌ನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರ ನೆರವಿನೊಂದಿಗೆ ಪೊಲೀಸರು ತಕ್ಷಣ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್‌ನ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.