ಬೆಂಗಳೂರು :ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ; ಜೈಲು ಸೇರಿದ್ದ ಜೋಡಿಯ ಮದುವೆಗಾಗಿ ಒಂದು ದಿನದ ಮಟ್ಟಿಗೆ ಪೆರೋಲ್ ನೀಡಿದ ಹೈಕೋರ್ಟ್.
ಕೊಲೆ ಪ್ರಕರಣದಲ್ಲಿ ಬೆಳಗಾವಿಯ ಮೂಡಲಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶ್ರೀಧರ ಮತ್ತು ಸಿದ್ದವ್ವ ಎಂಬ ಇಬ್ಬರೂ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ಧಾರವಾಡ ಪೀಠ, ಈ ಆದೇಶ ನೀಡಿದೆ.
ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಇಬ್ಬರು ಅಪರಾಧಿಗಳು ಈಗ ಮದುವೆ ಕಾರಣಕ್ಕಾಗಿ ಪೆರೋಲ್ ಕೋರುತ್ತಿರುವುದು ನೈತಿಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆದರೂ, ಶಾಸನಬದ್ಧವಾಗಿ ನಿಷೇಧವಿಲ್ಲದಿರುವಾಗ, ಕೇವಲ ನೈತಿಕತೆಯ ಆಧಾರದ ಮೇಲೆ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಈ ಅರ್ಜಿಯನ್ನು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳ ಆದೇಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕೈದಿಗಳು ತಮ್ಮ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳನ್ನು ಕಾಯ್ದುಕೊಳ್ಳಲು ಪೆರೋಲ್ ನೀಡುವುದು ಅಪರಾಧ ಸರಿಪಡಿಸುವಿಕೆಯ ಪ್ರಮುಖ ಭಾಗವಾಗಿದೆ. ಇದು ಕೈದಿಗಳ ಪುನರ್ ವಸತಿಗೆ ನೆರವಾಗುತ್ತದೆ ಎಂದು ತಿಳಿಸಿದೆ.
ಅರ್ಜಿದಾರರು ವಿಚಾರಣೆ ಮತ್ತು ಶಿಕ್ಷೆಯ ಅವಧಿ ಸೇರಿದಂತೆ ಈಗಾಗಲೇ 3 ವರ್ಷ, 5 ತಿಂಗಳು, 25 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಜೈಲಿನಲ್ಲಿ ಇವರ ನಡವಳಿಕೆ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯಗಳು ಇಲ್ಲ. ಇದಲ್ಲದೆ, ಮದುವೆಯನ್ನು ಜೈಲಿನ ಆವರಣದಲ್ಲೇ ನಡೆಸಲು ನಿಯಮಗಳ ಪ್ರಕಾರ ಅವಕಾಶವಿಲ್ಲ ಎಂಬ ಸರ್ಕಾರಿ ವಕೀಲರ ವಾದವನ್ನು ಪರಿಗಣಿಸಿರುವ ನ್ಯಾಯಪೀಠ, ಒಂದು ದಿನಕ್ಕೆ ಸೀಮಿತವಾಗಿ ಪೆರೋಲ್ ಮಂಜೂರು ಮಾಡಿದೆ.
ಅಲ್ಲದೆ, ಕೈದಿಗಳು ಮದುವೆಯಾಗಲು ನಿಶ್ಚಯಿಸುವ ದಿನದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪೆರೋಲ್ ನೀಡಬೇಕು. ಮದುವೆ ಸಮಾರಂಭದ ವೇಳೆ ಜೈಲರ್ ನಿಯೋಜಿಸುವ ಸೂಕ್ತ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಒದಗಿಸಬೇಕು. ಅಂದು ಸಂಜೆ 5 ಗಂಟೆಯ ಒಳಗಾಗಿ ಇಬ್ಬರೂ ಅರ್ಜಿದಾರರು ಮರಳಿ ಬೆಳಗಾವಿ ಕಾರಾಗೃಹಕ್ಕೆ ಹಿಂದಿರುಗಬೇಕು. ಆದೇಶದ ಪ್ರತಿ ಸಿಕ್ಕ ಒಂದು ವಾರದಲ್ಲಿ ಜೈಲು ಅಧಿಕಾರಿಗಳು ಸೂಕ್ತ ಆದೇಶ ಹೊರಡಿಸಬೇಕು ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಭೈರನಟ್ಟಿಯ ನಿವಾಸಿಗಳಾದ ಶ್ರೀಧರ್ ಮತ್ತು ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮಟ್ಟಿ ಎಂಬುವರಿಗೆ ಪೆರೋಲ್ ಮಂಜೂರು ಮಾಡಲಾಗಿದೆ.
ಆರೋಪಿ ಸಿದ್ದವ್ವ ಸಂಚು ರೂಪಿಸಿ ಮತ್ತೊಬ್ಬ ಅಪರಾಧಿ ಶ್ರೀಧರ್ ಜೊತೆಗೂಡಿ ತನ್ನ ಪತಿಯನ್ನು ಹತ್ಯೆ ಮಾಡಿದ್ದರು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆಯಾಗಿದ್ದು, ಪ್ರಸ್ತುತ ಬೆಳಗಾವಿಯ ಕಾರಾಗೃಹದಲ್ಲಿದ್ದಾರೆ.
90 ದಿನಗಳ ಪೆರೋಲ್ ಕೋರಿ ಅರ್ಜಿ ಸಲ್ಲಿಕೆ: ಜೈಲಿನಲ್ಲಿರುವ ಈ ಇಬ್ಬರೂ ಅಪರಾಧಿಗಳು ತಾವಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದೇವೆ. ಇದಕ್ಕಾಗಿ 90 ದಿನಗಳ ಕಾಲ ಪೆರೋಲ್ ನೀಡಬೇಕು ಎಂದು ಕೋರಿ ಸಲ್ಲಿಸಿದ್ದರು.