ಕೊಣಾಜೆ: ಸ್ಕೂಟರ್ಗೆ ಪಿಕಪ್ ವಾಹನ ಡಿಕ್ಕಿ; ಯುವಕರಿಬ್ಬರು ಸಾವುscooter-picup accident yougboys death
Tuesday, October 20, 2026
ಕೊಣಾಜೆ (ದಕ್ಷಿಣ ಕನ್ನಡ): ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನಕ್ಕೆ ಹಿಂಬಂದಿಯಿಂದ ಬಂದ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರಿಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಕಿನ್ಯ ಅರೆಬಿನಗರದ ಮಹಮ್ಮದ್ ಅಫ್ರಾಝ್ ( 22) ಹಾಗೂ ಉಕ್ಕುಡ ನಿವಾಸಿಯಾದ ಜುನೈದ್ (23) ಮೃತಪಟ್ಟ ಯುವಕರು. ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಪಿಕಪ್ ವಾಹನವು ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಡಿಕ್ಕಿ ಹೊಡೆದಿದೆ. ಮೃತ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅಫ್ರಾಝ್ ಮುಂಬೈ, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಇತ್ತೀಚಿಗೆ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಮುರಿದು ಬಿದ್ದ ವಿದ್ಯುತ್ ಕಂಬ: ಯುವಕರಿಬ್ಬರು ಸೋಮವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ದ್ವಿಚಕ್ರ ವಾಹನದಲ್ಲಿ ಚೇಳೂರಿನಿಂದ ಮನೆಯತ್ತ ತೆರಳುತ್ತಿದ್ದರು. ಬೋಳಿಯಾರ್ ದಾಟಿ ಪಡೀಲ್ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಹಿಂದಿನಿಂದ ಅತಿಯಾದ ವೇಗದಿಂದ ಬಂದ ಪಿಕಪ್ ವಾಹನ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ಕಳೆದುಕೊಂಡ ಪಿಕಪ್ ಬಲಭಾಗಕ್ಕೆ ತಿರುಗಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅಪಘಾತದಲ್ಲಿ ಅಫ್ರಾಝ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಜುನೈದ್ನನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತನೂ ಸಹ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.