ಗುಜರಾತ್ :ದೇವರ ಹೆಸರಿನಲ್ಲಿ ಘೋರ ಕೃತ್ಯ! 10 ವರ್ಷದ ಮಗನನ್ನೇ ಬಲಿ ಕೊಟ್ಟ ತಂದೆ..!

ಗುಜರಾತ್ :ದೇವರ ಹೆಸರಿನಲ್ಲಿ ಘೋರ ಕೃತ್ಯ! 10 ವರ್ಷದ ಮಗನನ್ನೇ ಬಲಿ ಕೊಟ್ಟ ತಂದೆ..!

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಮೂಢನಂಬಿಕೆಯ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನನ್ನು ಕೊಲೆ ಮಾಡಿದ ಬಳಿಕ ಆತನ ಮೃತದೇಹದ ಪಕ್ಕದಲ್ಲೇ ತಂದೆ ಮಲಗಿದ್ದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಘಟನೆ ಭಾನುವಾರ ರಾತ್ರಿ ಸಾನಂದ್ ತಾಲೂಕಿನ ವಿಂಛಿಯಾ ಗ್ರಾಮದಲ್ಲಿ ನಡೆದಿದೆ. ನರೇಶ್ ಪಟೇಲ್ ಎಂಬಾತ ತನ್ನ ಮಗ ಕರಣ್‌ನನ್ನು ಮನೆಯಲ್ಲಿದ್ದ ದೇವತೆಯ ಸಣ್ಣ ಪೀಠದ ಬಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೃಷಿ ಕಾರ್ಮಿಕನಾಗಿದ್ದು, ಮಗನೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದನು.

ಪತ್ನಿ ತವರು ಮನೆಗೆ ತೆರಳಿದ್ದಳು:

ನರೇಶ್ ಪಟೇಲ್ ಮತ್ತು ಆತನ ಪತ್ನಿ ಭಾರ್ತಿಬೆನ್ ನಡುವೆ ಜಗಳ ನಡೆದ ಹಿನ್ನೆಲೆಯಲ್ಲಿ ಆಕೆ ತನ್ನ ತವರು ಮನೆಗೆ ತೆರಳಿದ್ದರು. ಮಗ ಶಾಲೆಗೆ ಹೋಗಬೇಕಿದ್ದ ಕಾರಣ ಆತನನ್ನು ತಂದೆಯ ಬಳಿಯೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಭಾನುವಾರ ರಾತ್ರಿ ನೆರೆಹೊರೆಯವರು ಭಾರ್ತಿಬೆನ್‌ಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗ್ರಾಮಕ್ಕೆ ಬಂದ ಆಕೆ, ರಾತ್ರಿ ಸುಮಾರು 9.30ರ ವೇಳೆಗೆ ಮಗ ಕರಣ್ ಮಂಚದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಈ ವೇಳೆ ಪತಿ ನರೇಶ್ ಕೂಡ ಮಗನ ಮೃತದೇಹದ ಪಕ್ಕದಲ್ಲೇ ಮಲಗಿದ್ದನು. ಆತನ ಬಟ್ಟೆಗಳ ಮೇಲೂ ರಕ್ತದ ಕಲೆಗಳಿದ್ದವು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಗನನ್ನು ಕೊಂದಿದ್ದೇಕೆ?

ಪತ್ನಿ ಘಟನೆ ಬಗ್ಗೆ ಪ್ರಶ್ನಿಸಿದಾಗ, ನರೇಶ್ ತನ್ನ ತಂದೆ ಈ ಹಿಂದೆ ‘ಭುವಾ’ ಆಗಿದ್ದರು ಮತ್ತು ಅವರ ನಂತರ ತಾನು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಆದರೆ ತನ್ನ ನಂತರ ಕುಟುಂಬದಲ್ಲಿ ಬೇರೆ ಯಾರೂ ಭುವಾ ಆಗಬಾರದು ಎಂಬ ಉದ್ದೇಶದಿಂದ ಮಗನನ್ನು ಬಲಿ ನೀಡಿದ್ದಾಗಿ ಆತ ಹೇಳಿದ್ದಾನೆ ಎಂದು ಭಾರ್ತಿಬೆನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇಲ್ಲಿ ‘ಭುವಾ’ ಎಂದರೆ ಸ್ಥಳೀಯ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ದೇವತೆ ಮತ್ತು ಸಮುದಾಯದ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿ.

ಪೊಲೀಸರಿಂದ ತನಿಖೆ:

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಾನಂದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ನರೇಶ್ ಪಟೇಲ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಹತ್ಯೆಗೆ ಸಂಬಂಧಿಸಿದ ನಿಖರ ಕಾರಣಗಳು ಹಾಗೂ ಘಟನೆಯ ಇತರ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೂಢನಂಬಿಕೆ ಮತ್ತು ಕೌಟುಂಬಿಕ ಹಿನ್ನೆಲೆಯ ಆರೋಪಗಳ ನಡುವೆ ಅಮಾಯಕ ಬಾಲಕನ ಜೀವ ಬಲಿಯಾಗಿರುವ ಈ ಘಟನೆ ಗುಜರಾತ್‌ನಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.

Ads on article

Advertise in articles 1

advertising articles 2

Advertise under the article