ಮೈಸೂರು:ಸೋಲಿಗ ಬುಡಕಟ್ಟಿನ ಮೊದಲ ವಕೀಲನಾದ 24 ವರ್ಷದ ಯುವಕ: ಹೈಕೋರ್ಟ್​ನಲ್ಲಿ ವೃತ್ತಿ ಆರಂಭ.! first soliga highcourt lawyer

ಮೈಸೂರು:ಸೋಲಿಗ ಬುಡಕಟ್ಟಿನ ಮೊದಲ ವಕೀಲನಾದ 24 ವರ್ಷದ ಯುವಕ: ಹೈಕೋರ್ಟ್​ನಲ್ಲಿ ವೃತ್ತಿ ಆರಂಭ.! first soliga highcourt lawyer

ಮೈಸೂರು: ನಾಗರಿಕ ಸಮಾಜದಿಂದ ದೂರವಿರುವ ಹಾಗೂ ದಟ್ಟಾರಣ್ಯಗಳ ಮಧ್ಯೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಸೋಲಿಗ ಬುಡಕಟ್ಟು ಸಮುದಾಯದ ಪ್ರವೀಣ್ (24) ಎಂಬವರು ತಮ್ಮ ಸಮುದಾಯದ ಮೊದಲ ವಕೀಲರಾಗುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ತಮ್ಮ ಸಾಧನೆಯ ಕುರಿತು ಯುವ ವಕೀಲ ಪ್ರವೀಣ್ "ನಾವು 21ನೇ ಶತಮಾನದಲ್ಲಿದ್ದೇವೆ. ಮನುಷ್ಯ ಚಂದ್ರಲೋಕಕ್ಕೆ ಹೋಗಿ ವಾಸಮಾಡುವ ಹಂತಕ್ಕೆ ಬಂದಿದ್ದೇವೆ. ಇಂತಹ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕೆಲವು ಜನಾಂಗಗಳು ಕಾಡಿನ ಮಧ್ಯೆ ಇಂದಿಗೂ ವಾಸಿಸುತ್ತಿವೆ. ಅವರು ತಮ್ಮ ಹಕ್ಕುಗಳ ಬಗ್ಗೆ ಇಂದಿಗೂ ತಿಳಿದಿಲ್ಲ. ಇಂತಹ ಜನಾಂಗ ಇಂದಿಗೂ ಕಾಡಿನ ಮಧ್ಯೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ವಾಸ ಮಾಡುತ್ತಿರುವುದು ಬೇಸರದ ವಿಚಾರ. ಅಂತಹ ಬುಡಕಟ್ಟಿನ ಸೋಲಿಗ ಜನಾಂಗದಿಂದ ಬಂದ ನಾನು ವಕೀಲರಾಗಿದ್ದು ಖುಷಿ ವಿಚಾರ" ಎಂದು ಪ್ರವೀಣ್ ಹೇಳಿದರು.

ತಮ್ಮ ಹಿನ್ನೆಲೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗಮಂಗಲ ನಮ್ಮ ಗ್ರಾಮ. ನಾನು ಹುಟ್ಟಿ ಬೆಳೆದಿದ್ದು ಇಲ್ಲಿಯೇ. ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ದಟ್ಟ ಅರಣ್ಯ ಮಧ್ಯೆ ಇರುವ ಸೋಲಿಗ ಕುಟುಂಬ ವಾಸ ಮಾಡುವ ಗ್ರಾಮ ಕೂಡ ಇದಾಗಿದೆ. ರಾಜ್ಯ ವಕೀಲರ ಪರಿಷತ್ತಿನಲ್ಲಿ ಹೆಸರನ್ನು ನೋಂದಾಯಿಸಿಕೊಂಡು, ಕರ್ನಾಟಕ ಹೈಕೋರ್ಟ್​ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದೇನೆ. ನಮ್ಮ ಸಮುದಾಯದ ಮೊದಲ ವಕೀಲನಾಗಿರುವುದು ಹೆಮ್ಮೆಯ ವಿಚಾರ" ಎಂದರು.

"ನಾನು ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಹಾಗೂ ಪಿ.ಯು.ಸಿಯನ್ನು ಹನೂರಿನಲ್ಲಿ ಮುಗಿಸಿದೆ. ರಾಮನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ 5 ವರ್ಷದ ಬಿ.ಎ., ಎಲ್.ಎಲ್.ಬಿ ಶಿಕ್ಷಣ ಪೂರ್ಣಗೊಳಿಸಿದೆ. ಓದುವಾಗಲೇ ಸೆಷನ್ಸ್ ಕೋರ್ಟ್​ನಲ್ಲಿ ಇಂಟರ್ನ್‌ಶಿಪ್‌(Internship) ಮಾಡಿದೆ. ಪಿ.ಯು.ಸಿ ಬಳಿಕ ಕೃಷಿ ವಿಜ್ಞಾನ ಓದಬೇಕೆಂಬ ಆಸೆ ಇತ್ತು. ಆದರೆ, ಶೀಟು ಸಿಗದ ಕಾರಣ ನನ್ನ ಶಿಕ್ಷಕರು, ಸಮುದಾಯದ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆ ಮತ್ತು ಸಹಾಯದೊಂದಿಗೆ ಬಿ.ಎ., ಎಲ್.ಎಲ್.ಬಿ ಓದಿದೆ. ಈಗ ಕರ್ನಾಟಕ ಹೈಕೋರ್ಟ್​ನಲ್ಲಿ ಶಿವಶಾಸ್ತ್ರಿ ಎಂಬ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದೇನೆ" ಎಂದು ತಿಳಿಸಿದರು.


ಕಾನೂನು ಓದಿದ್ದು ಏಕೆ?: "ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ಸೇರಿದಂತೆ ಇತರೆ ಕಡೆ ಅರಣ್ಯ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಇಂದಿಗೂ ಹಲವು ಸಮುದಾಯಗಳು ವಾಸ ಮಾಡುತ್ತಿವೆ. ಇವರಿಗೆ ಯಾವುದೇ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಇಲ್ಲ. ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯದಿರುವ ಸೋಲಿಗ ಬುಡಕಟ್ಟಿನ ಸಮಸ್ಯೆಗಳು ನನ್ನನ್ನು ಕಾನೂನು ಓದಲು ಪ್ರೇರೇಪಿಸಿತು. ನನ್ನ ಸಮುದಾಯಕ್ಕೆ ಏನಾದರೂ ಮಾಡಬೇಕೆಂಬ ನಿರ್ಧಾರವೂ ಇದರಲ್ಲಿದೆ. ಬುಡಕಟ್ಟು ಸಮುದಾಯದ ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಬೇಕಿತ್ತು. ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಸಮುದಾಯಕ್ಕೆ ಬಂದು ತಲುಪುತ್ತಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಮೂಲಕ ಹಲವು ಹೋರಾಟಗಳನ್ನು ಮಾಡಬೇಕಾಯಿತು. ಕಾನೂನು ತಿಳಿದುಕೊಂಡರೆ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು ಎಂಬುದು ಮನದಟ್ಟಾಯಿತು. ಭವಿಷ್ಯದಲ್ಲಿ ಸಮುದಾಯವನ್ನು ನಾಗರಿಕ ಪ್ರಪಂಚಕ್ಕೆ ತರಬೇಕು ಎನ್ನುವುದು ನನ್ನ ಆಸೆ" ಎಂದು ಪ್ರವೀಣ್ ಹೇಳಿದರು.

ಇದೇ ವೇಳೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಪ್ರವೀಣ್, ತಮ್ಮ ಕಷ್ಟದ ದಿನಗಳು, ಬಾಲ್ಯ ಹಾಗೂ ವಿದ್ಯಾಭ್ಯಾಸದಲ್ಲಿ ಇಂಗ್ಲಿಷ್​ನಿಂದ ತಾವು ಎದುರಿಸಿದ ತೊಂದರೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article