ಬೀದರ್ :ಗಂಡನಿಗೆ ಡಿವೋರ್ಸ್ ಕೊಟ್ಟು ಪ್ರಿಯತಮನ ಮನೆಗೆ ಹೋದ ಯುವತಿಗೆ ಆಘಾತ: ಮದುವೆಗೆ ನಿರಾಕರಿಸಿ ವಂಚಿಸಿದ ಪ್ರೇಮಿ!

ಬೀದರ್: ಪ್ರೀತಿಸಿದವನಿಗಾಗಿ ಹೆಂಡತಿಯಾಗಿದ್ದ ಗಂಡನಿಗೇ ವಿಚ್ಛೇದನ ನೀಡಿ ಬಂದ ಮಹಿಳೆಯೊಬ್ಬಳಿಗೆ ಪ್ರಿಯತಮ ಕೈಕೊಟ್ಟಿರುವ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೆಲವಾಡ ಗ್ರಾಮದಲ್ಲಿ ನಡೆದಿದೆ. ಅತ್ತ ಗಂಡನೂ ಇಲ್ಲ, ಇತ್ತ ಪ್ರಿಯತಮನೂ ಜೊತೆಗಿಲ್ಲದೆ ಆ ಯುವತಿಯ ಬದುಕು ಬೀದಿಪಾಲಾಗಿದ್ದು, ನ್ಯಾಯಕ್ಕಾಗಿ ಪ್ರಿಯತಮನ ಮನೆ ಮುಂದೆ ಕಳೆದ 10 ದಿನಗಳಿಂದ ಹೈಡ್ರಾಮಾ ನಡೆಸುತ್ತಿದ್ದಾಳೆ.
4 ವರ್ಷಗಳ ಪ್ರೀತಿ, ಡಿವೋರ್ಸ್ ನಾಟಕ
ಸಂಗೀತಾ ಎಂಬ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದರೂ, ದತ್ತು ಎಂಬ ಯುವಕನೊಂದಿಗೆ ಕಳೆದ 4 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದಳು. ಗಂಡನಿಗೆ ವಿಚ್ಛೇದನ ನೀಡಿದರೆ ತಾನೇ ಮದುವೆಯಾಗುವುದಾಗಿ ದತ್ತು ಭರವಸೆ ನೀಡಿದ್ದನು. ಆತನ ಮಾತನ್ನು ನಂಬಿ ಸಂಗೀತಾ ತನ್ನ ಮೊದಲ ಪತಿಗೆ ಡಿವೋರ್ಸ್ ನೀಡಿ ಬಂದಿದ್ದಾಳೆ.
ಆದರೆ, ಸಂಗೀತಾ ಗಂಡನನ್ನು ಬಿಟ್ಟು ಬಂದ ಬಳಿಕ ದತ್ತು ಮದುವೆಯಾಗಲು ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೆ, ಮಹಿಳೆ ತನ್ನ ಮನೆ ಬಳಿ ಬರುವುದನ್ನು ತಿಳಿದು ದತ್ತು ಮನೆಯಿಂದ ಪರಾರಿಯಾಗಿದ್ದು, ಆತನ ಕುಟುಂಬಸ್ಥರೂ ಸಹ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾರೆ.
ಪೊಲೀಸರ ಮೆಟ್ಟಿಲೇರಿದ್ದ ವಿಚಾರ ಹಾಗೂ ವಿಡಿಯೋ ವೈರಲ್
ಈ ಹಿಂದೆ ಈ ವಿವಾದ ಪೊಲೀಸ್ ಠಾಣೆವರೆಗೂ ಹೋಗಿತ್ತು. ಆ ಸಂದರ್ಭದಲ್ಲಿ ದತ್ತು ತಂದೆ ಹಾಗೂ ಕುಟುಂಬದವರೇ ಸಂಗೀತಾಳಿಗೆ ಗಂಡನಿಗೆ ವಿಚ್ಛೇದನ ನೀಡಿ ಬರುವಂತೆ ಹೇಳಿದ್ದರು ಎನ್ನಲಾಗಿದೆ. ಆದರೆ ಈಗ ಮಾತುತಪ್ಪಿ ವಂಚಿಸಿದ್ದಾರೆ.
ತನ್ನ ಕಷ್ಟದ ಪರಿಸ್ಥಿತಿಯ ಬಗ್ಗೆ ಸ್ವತಃ ಸಂಗೀತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತನ್ನ ಜೀವಕ್ಕೆ ಏನಾದರೂ ಅಪಾಯ ಬಂದರೆ ಅದಕ್ಕೆ ಪ್ರಿಯತಮ ದತ್ತು ಹಾಗೂ ಆತನ ಕುಟುಂಬವೇ ನೇರ ಕಾರಣ ಎಂದು ಅಳಲು ತೋಡಿಕೊಂಡಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಮೋಸ ಹೋದ ಯುವತಿಯ ಸ್ಥಿತಿ ಈಗ ಕಣ್ಣೀರಿನಲ್ಲಿ ಕಾಲ ಕಳೆಯುವಂತಾಗಿದೆ.