ಬಂಟ್ವಾಳ:ಬಹುಭಾಷಾ ಜಾಗೃತಿ ಅಭಿಯಾನಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಬಾಳ್ತಿಲದ ಪ್ರತಿಭಾನ್ವಿತ ಬಾಲಕಿ ಸನ್ನಿಧಿ ಎಲ್.ಎಸ್. ಕಶೆಕೋಡಿ ಅವರು ಪ್ರತಿಷ್ಠಿತ ‘ಕರಾವಳಿ ಬಾಲ ಪ್ರತಿಭೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ಸನ್ನಿಧಿ ಅವರು ಆಯ್ಕೆಯಾಗಿರುವುದು ಬಂಟ್ವಾಳ ತಾಲೂಕಿನ ಹೆಮ್ಮೆಗೆ ಮತ್ತೊಂದು ಗರಿ ಮೂಡಿಸಿದೆ.
ಆರು ಭಾಷೆಗಳಲ್ಲಿ ಮತದಾನ ಜಾಗೃತಿ
ದೆಹಲಿ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಆರು ವಿವಿಧ ಭಾಷೆಗಳಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಮೂಲಕ ಸನ್ನಿಧಿ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಮತದಾನ ಜಾಗೃತಿಯ ಜತೆಗೆ ಸ್ವಚ್ಛತೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆಯೂ ನಿರಂತರವಾಗಿ ಅರಿವು ಮೂಡಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಅಭಿಯಾನದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸನ್ನಿಧಿ ಅವರು ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ನವೆಂಬರ್ 29ರಂದು ಪ್ರಶಸ್ತಿ ಪ್ರದಾನ
ಕಾಸರಗೋಡಿನ ಮಧೂರು ರಸ್ತೆಯ ಮೀಪುಗುರಿ, ಪಾರೆಕಟ್ಟೆ-ಕನ್ನಡ ಗ್ರಾಮ ರಸ್ತೆಯಲ್ಲಿರುವ ಕಾಸರಗೋಡು ಕನ್ನಡ ಗ್ರಾಮದಲ್ಲಿ ನವೆಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ‘ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026’, ‘ಕೇರಳ-ಕರ್ನಾಟಕ ಉತ್ಸವ’ ಹಾಗೂ ‘ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ’ ಆಯೋಜಿಸಲಾಗಿದೆ.
ನವೆಂಬರ್ 29ರಂದು ಭಾನುವಾರ ಅಪರಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸನ್ನಿಧಿ ಅವರು ‘ಕರಾವಳಿ ಬಾಲ ಪ್ರತಿಭೆ ಪ್ರಶಸ್ತಿ’ ಸ್ವೀಕರಿಸಲಿದ್ದಾರೆ.
ಕಳೆದ 37 ವರ್ಷಗಳಿಂದ ಕೇರಳ ರಾಜ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆ ಹಾಗೂ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಸಮ್ಮೇಳನದ ಅಂಗವಾಗಿ ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ‘ಕೇರಳ-ಕರ್ನಾಟಕ ಭವನ’ದ ಭೂಮಿಪೂಜೆ ಮತ್ತು ಶಿಲಾನ್ಯಾಸ ಸಮಾರಂಭವನ್ನೂ ಹಮ್ಮಿಕೊಂಡಿದೆ.
`