BREAKING
ದಕ್ಷಿಣ ಕನ್ನಡ

ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಕಲಾಂ ಬಳಸಿದ್ದ ಟಾಟಾ ನ್ಯಾನೋ ಕಾರು, ಅಪೂರ್ವ ಪೆನ್ನು ಪ್ರದರ್ಶನಕ್ಕೆ! ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಅಮೂಲ್ಯ ಕೊಡುಗೆ ಹಸ್ತಾಂತರ

ಬೆಳ್ತಂಗಡಿ: ಭಾರತ ರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಳಸಿದ್ದ ಟಾಟಾ ನ್ಯಾನೋ ಕಾರು ಹಾಗೂ ಅಪೂರ್ವ ಪೆನ್ನನ್ನು ಧರ್ಮಸ್ಥಳದ ಮಂಜೂಷಾ ವಾಹನಗಳ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲು ಸಮರ್ಪಿಸಲಾಗಿದೆ.

ರಾಮೇಶ್ವರಂನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಈ ಅಮೂಲ್ಯ ವಸ್ತುಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆಯವರು, ಡಾ. ಅಬ್ದುಲ್ ಕಲಾಂ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಸ್ಮರಿಸಿದರು. ಅವರ ಸರಳ ವ್ಯಕ್ತಿತ್ವ, ಸರ್ವಧರ್ಮ ಸಮನ್ವಯದ ನಿಲುವು, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ನೆನಪಿಸಿಕೊಂಡರು.

ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಎಲ್ಲರೊಂದಿಗೂ ಮುಕ್ತವಾಗಿ ಸಂವಹನ ನಡೆಸುತ್ತಿದ್ದ ಕಲಾಂ ಅವರ ಸರಳ ಸ್ವಭಾವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಅವರ ಸ್ಮರಣಾರ್ಥವಾಗಿ ನೀಡಲಾದ ಟಾಟಾ ನ್ಯಾನೋ ಕಾರು ಮತ್ತು ಅಪೂರ್ವ ಪೆನ್ನಿನ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಎ.ಪಿ.ಜೆ.ಎಂ. ನಝೀಮಾ ಮರೈಕಾಯಲ್, ಕಾರ್ಯದರ್ಶಿ ಎ.ಪಿ.ಜೆ.ಎಂ. ಜೈನೀಲಾಭಿ ಡೀಮ್ ಹಾಗೂ ಸಹಸಂಸ್ಥಾಪಕ ಎ.ಪಿ.ಜೆ.ಎಂ. ಶೇಖ್ ಸಲೀಂ ಉಪಸ್ಥಿತರಿದ್ದರು. ಪ್ರತಿಷ್ಠಾನದ ಪರವಾಗಿ ಕಾರು ಮತ್ತು ಪೆನ್ನನ್ನು ಅವುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳ ಸಹಿತ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು.

ಪ್ರತಿಷ್ಠಾನದ ಈ ಅಮೂಲ್ಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದ ಡಾ. ವೀರೇಂದ್ರ ಹೆಗ್ಗಡೆಯವರು, ಪ್ರತಿಷ್ಠಾನದ ಪ್ರತಿನಿಧಿಗಳನ್ನು ಗೌರವಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅನಿಲ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


📢 ಡೇ ಕರ್ನಾಟಕ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!