BREAKING
ದಕ್ಷಿಣ ಕನ್ನಡ

ಉಳ್ಳಾಲ: ಕ್ಲಸ್ಟರ್ ಕಿಚನ್ ವಿರೋಧಿಸಿ ಬಿಸಿಯೂಟ ನೌಕರರ ಪ್ರತಿಭಟನೆ; ಸರಕಾರದ ವಿರುದ್ಧ ಆಕ್ರೋಶ ಗೌರವಧನದ ಹೆಸರಿನಲ್ಲಿ ಅಗೌರವ, ಅಮಾನವೀಯತೆ ಪ್ರದರ್ಶನ: ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಸಿಐಟಿಯು ಕಿಡಿ


ಉಳ್ಳಾಲ
: ಬಿಸಿಯೂಟ ಯೋಜನೆಯಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೊಳಿಸುವ ಸರಕಾರದ ಕ್ರಮವನ್ನು ವಿರೋಧಿಸಿ, ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ನೌಕರರಿಗೇ ವಹಿಸಬೇಕು ಹಾಗೂ ಪ್ರತಿ ತಿಂಗಳು ವೇತನವನ್ನು ನಿಯಮಿತವಾಗಿ ಪಾವತಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಬಿಸಿಯೂಟ ನೌಕರರು ಮಂಗಳವಾರ (ನ.25) ಮುಷ್ಕರ ನಡೆಸಿದರು.

ಇದರ ಭಾಗವಾಗಿ ಉಳ್ಳಾಲ ತಾಲೂಕಿನ ನೂರಾರು ಬಿಸಿಯೂಟ ನೌಕರರು ಉಳ್ಳಾಲ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕೇಂದ್ರ ಸರಕಾರದ ಯೋಜನೆಯಾದ ಬಿಸಿಯೂಟ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಸಾವಿರಾರು ನೌಕರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಗೌರವಧನದ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗೌರವ ಹಾಗೂ ಅಮಾನವೀಯತೆಯನ್ನು ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದರು.

ಮಹಿಳೆಯರನ್ನು ಮಾತೆ ಎಂದು ಗೌರವಿಸುವ ಸರಕಾರಗಳೇ ಮಹಿಳಾ ಕಾರ್ಮಿಕರನ್ನು ತೀವ್ರವಾಗಿ ಶೋಷಿಸುತ್ತಿವೆ. ಕಠಿಣ ಪರಿಶ್ರಮದಿಂದ ದುಡಿಯುವ ಕಾರ್ಮಿಕರಿಗೆ ಗೌರವಧನವಲ್ಲ, ಗೌರವಯುತವಾದ ವೇತನ ಬೇಕಾಗಿದೆ. ಅದನ್ನೂ ತಿಂಗಳುಗಟ್ಟಲೆ ವಿಳಂಬ ಮಾಡುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಸುಮಾರು 16 ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯೇ ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಖಾಸಗಿಯವರಿಗೆ ನೀಡಬಾರದು ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಇದೀಗ ಸರಕಾರವೇ ಯೋಜನೆಯನ್ನು ಖಾಸಗೀಕರಣದತ್ತ ಕೊಂಡೊಯ್ಯುತ್ತಿದೆ. ಕ್ಲಸ್ಟರ್ ಕಿಚನ್ ವ್ಯವಸ್ಥೆಯ ಮೂಲಕ ಬಿಸಿಯೂಟ ನೌಕರರ ಬದುಕಿಗೆ ಹೊಡೆತ ನೀಡಲು ಸರಕಾರ ಮುಂದಾಗಿದೆ ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಬಿಸಿಯೂಟ ನೌಕರರ ಸಂಕಷ್ಟ ಹಾಗೂ ಸರಕಾರಗಳ ಅನ್ಯಾಯವನ್ನು ವಿವರಿಸಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಬಿಸಿಯೂಟ ನೌಕರರ ವೇತನವನ್ನು ಕನಿಷ್ಠ 7,000 ರೂ. ಹೆಚ್ಚಿಸಬೇಕು. ವೇತನವನ್ನು ಯಾವುದೇ ವಿಳಂಬವಿಲ್ಲದೆ ಪ್ರತಿ ತಿಂಗಳು ಪಾವತಿಸಬೇಕು. ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಕೈಬಿಟ್ಟು ಬಿಸಿಯೂಟ ತಯಾರಿಕೆಯ ಜವಾಬ್ದಾರಿಯನ್ನು ನೌಕರರಿಗೇ ವಹಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಬಿಸಿಯೂಟ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿ ಸಿಐಟಿಯು ಜಿಲ್ಲಾ ನಾಯಕರಾದ ಜಯಂತ ನಾಯಕ್, ಇಬ್ರಾಹಿಂ ಅಂಬ್ಲಮೊಗರು, ಪ್ರಮೋದಿನಿ ಹಾಗೂ ವಿಲಾಸಿನಿ ಮಾತನಾಡಿ, ವಿವಿಧ ವಿಭಾಗಗಳ ಕಾರ್ಮಿಕರು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಬಿಸಿಯೂಟ ನೌಕರರ ಸಂಘಟನೆಯ ಉಳ್ಳಾಲ ತಾಲೂಕು ಮುಖಂಡರಾದ ರತ್ನಮಾಲ, ಬಬಿತಾ, ಲತಾ, ವಿದ್ಯಾ, ಗಾಯತ್ರಿ ಹಾಗೂ ನಳಿನಿ ವಹಿಸಿದ್ದರು.




📢 ಡೇ ಕರ್ನಾಟಕ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!